ಶಿರಸಿ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ವರದಾ, ಶಾಲ್ಮಾಲಾ ನದಿಗಳು ಉಕ್ಕಿ ಹರಿಯುತ್ತಿದ್ದು, ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಭಾರೀ ಗಾಳಿಗೆ ನೂರಾರು ವಿದ್ಯುತ್ ಕಂಬಗಳು, ಮರ ಧರೆಗುರುಳಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.
ಮಳೆ ಗಾಳಿಯಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು, ಬಾಳೆ ಹಾಗೂ ಭತ್ತದ ಬೆಳೆಗೆ ಹಾನಿಯಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ವರದೆಯ ಆರ್ಭಟ ಜೋರಾಗಿದ್ದು, ಅಜ್ಜರಣಿ, ಕೇಂಗ್ರೆ, ದೇವದಕೆರೆ, ಶಾಲ್ಮಲಾ ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಹಾನಿಗೊಳಗಾದ ವಿದ್ಯುತ್ ಸಂಪರ್ಕ ಸರಿಪಡಿಸುವಲ್ಲಿ ಹೆಸ್ಕಾಂ ಸಿಬ್ಬಂದಿ ನಿರತರಾಗಿದ್ದಾರೆ.
ತುಂಬಿ ಹರಿಯುತ್ತಿರುವ ನದಿಗಳು ಮನೆಗೆ ಹಾನಿ : ತಾಲೂಕಿನ ಕಲಗಾರದ ಗೀತಾ ನಾಯ್ಕ, ಬಚಗಾಂವದ ಪಾರ್ವತಿ ಮಡಿವಾಳ, ಗುತ್ಗಾರದ ಶೋಭಾ ಮುಕ್ರಿ, ಪ್ರೇಮಾ ಭೋವಿವಡ್ಡರ, ಮಂಜಾ ಗೌಡ, ಗಣೇಶನಗರದ ವಿನುತಾ ಹೆಗಡೆ, ಕಾನಳ್ಳಿಯ ರಾಮಾ ಗೌಡ, ಬಿಸಲಕೊಪ್ಪದ ಮಾದೇವಿ ನಾಯ್ಕ, ಮಠದೇವಳದ ಮಾಬ್ಲು ಚನ್ನಯ್ಯ ಎಂಬವರ ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 2.40 ಲಕ್ಷ ರೂ. ನಷ್ಟ ಸಂಭವಿಸಿದೆ. ಮತ್ತೀಗಾರದ ಗಣಪತಿ ಶೆಟ್ಟಿ ಎಂಬವರ ಬಾಳೆ ತೋಟ, ಗೌಡಳ್ಳಿಯ ಬಸ್ತ್ಯಾಂವ ಗೋನ್ಸಾಲ್ವಿಸ್ ಎಂಬವರ ಭತ್ತದ ಗದ್ದೆಗೆ ನೀರು ನುಗ್ಗಿ ಅಂದಾಜು 75 ಸಾವಿರ ರೂ. ನಷ್ಟ ಉಂಟಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
167 ವಿದ್ಯುತ್ ಕಂಬಗಳಿಗೆ ಹಾನಿ : ಭಾರೀ ಮಳೆಯಿಂದ ಹೆಸ್ಕಾಂ ವ್ಯಾಪ್ತಿಯಲ್ಲಿ 167 ವಿದ್ಯುತ್ ಕಂಬಗಳು ಧರೆಗುರುಳಿದ್ದು, 4 ಟ್ರಾನ್ಸ್ ಫಾರ್ಮ್ಮರ್ಗಳಿಗೆ ಹಾನಿಯಾಗಿದೆ. ಒಟ್ಟು 47 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.