ಕಾರವಾರ: ಕರಾವಳಿಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನರು ಮನೆಯಿಂದ ಹೊರಬರಲು ಹೆದರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಸರ್ಕಾರಿ ಶಾಲೆಯೊಂದರಲ್ಲಿ ಕೊಳಚೆ ನೀರು ತುಂಬಿಕೊಂಡಿರುವುದನ್ನು ಕಂಡ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು ಶ್ರಮದಾನದ ಮೂಲಕ ಶಾಲೆ ಅಂಗಳದಲ್ಲಿ ನಿಂತಿರುವ ನೀರನ್ನು ಹೊರಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ಕಾರವಾರ ಸೇರಿದಂತೆ ಕರಾವಳಿಯಾದ್ಯಂತ ಭರ್ಜರಿ ಮಳೆಯಾಗುತ್ತಿದ್ದು, ಇದರಿಂದ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ತಾಲೂಕಿನ ಮಾಜಾಳಿಯ ಮಾಡಿಸಿಟ್ಟಾದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತಗ್ಗು ಪ್ರದೇಶದಲ್ಲಿದ್ದ ಕಾರಣ ಊರಿನ ಕೊಳಚೆ ನೀರು ಶಾಲೆಯ ಆವರಣಕ್ಕೆ ಹರಿದು ಬಂದ ಹಿನ್ನೆಲೆ ಮಕ್ಕಳು ಆಟವಾಡುವುದು ಕಷ್ಟಕರವಾಗಿತ್ತು. ಆದ್ರೆ ಇದನ್ನು ಗಮನಿಸಿದ ಕಾಲೇಜು ವಿದ್ಯಾರ್ಥಿಗಳಾದ ಪ್ರಜ್ವಲ್ ಶೇಟ್ ಮತ್ತು ಅಭಿಷೇಕ್ ಕಳಸ ತಮ್ಮ ಇತರ ಸ್ನೇಹಿತರೊಂದಿಗೆ ಚರ್ಚಿಸಿ ಸ್ವಚ್ಛತೆಗಾಗಿಯೇ ಕೆಲ ವಾರಗಳ ಹಿಂದೆ ಕಟ್ಟಿಕೊಂಡ ಕಡಲಸಿರಿ ಯುವ ಸಂಘದ ಮೂಲಕ 8 ವಿದ್ಯಾರ್ಥಿಗಳು ಸ್ವಚ್ವತೆಗೆ ಇಳಿದಿದ್ದರು. ಪ್ರತಿ ಬಾರಿಯೂ ಮಳೆ ಬಂದಾಗ ನೀರು ತುಂಬುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಗಮನಿಸಿದ ಯುವಕ-ಯುವತಿಯರು ನೀರನ್ನು ಹೊರ ಹಾಕಿ, ತಗ್ಗು ಪ್ರದೇಶದಲ್ಲಿ ಮಣ್ಣು ಸುರಿದು ಸಮತಟ್ಟು ಮಾಡುವ ಮೂಲಕ ಶ್ರಮದಾನ ನಡೆಸಿದ್ದಾರೆ.