ಕಾರವಾರ:ಹೆದ್ದಾರಿ ನಿರ್ಮಾಣಕ್ಕಾಗಿ ತೆರವುಗೊಳಿಸಿದ ಗುಡ್ಡಗಳು ಮತ್ತೆ ಕುಸಿಯದಂತೆ ಹಾಕಲಾಗಿದ್ದ ಸಿಮೆಂಟ್ ಜಾಲರಿ ಮಳೆಯಿಂದಾಗಿ ಹಾಳಾಗಿದೆ. ಈ ಅವೈಜ್ಞಾನಿಕ ಕ್ರಮದಿಂದ ಗುಡ್ಡಗಳು ಕುಸಿಯುವುದು ಮಾತ್ರ ನಿಂತಿಲ್ಲ.
ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಬೃಹತ್ ಗುಡ್ಡಗಳನ್ನು ಕೊರೆಯಲಾಗಿತ್ತು. ಈ ಗುಡ್ಡಗಳು ಕುಸಿಯದಂತೆ ಐಆರ್ಬಿ ಕಂಪನಿ ಕಬ್ಬಿಣದ ಜಾಲರಿಯನ್ನು ಹೊದಿಸಿ, ಅದರ ಮೇಲೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿತ್ತು.
ಆದರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕುಮಟಾ ತಾಲೂಕಿನ ಖೈರೆ ಕ್ರಾಸ್ ಬಳಿಯ ಗುಡ್ಡಕ್ಕೆ ಲೇಪಿಸಿದ್ದ ಜಾಲರಿ ಜತೆಗೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದೆ. ಖೈರೆ ಕ್ರಾಸ್ನಿಂದ ಶಿರಸಿ ಒಳ ಮಾರ್ಗದ ಗುಡ್ಡಕ್ಕೆ 50 ಅಡಿ ಎತ್ತರದವರೆಗೂ ಸಿಮೆಂಟ್ ಪ್ಲಾಸ್ಟಿಂಗ್ ಮಾಡಲಾಗಿತ್ತು. ಈ ವಿಧಾನದಿಂದ ಗುಡ್ಡ ಕುಸಿತ ತಡೆಯಬಹುದೆಂಬ ಗುತ್ತಿಗೆದಾರ, ಎಂಜಿನಿಯರ್ಗಳ ಚಿಂತನೆ ತಲೆಕೆಳಗಾಗಿದೆ.
ಮಳೆಗಾಲಕ್ಕೂ ಮುನ್ನವೇ ಹಲವೆಡೆ ಲೇಪಿಸಿದ್ದ ಸಿಮೆಂಟ್ ಬಿರುಕು ಬಿಟ್ಟಿತ್ತು. ತಾತ್ಕಾಲಿಕ ದುರಸ್ತಿ ಮಾಡಿ ತೇಪೆ ಹಾಕಲಾಗಿದ್ದರೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಿಮೆಂಟ್ ಪ್ಲಾಸ್ಟಿಂಗ್ ಕೊಚ್ಚಿಹೊಂಡು ಹೋಗ್ತಿದೆ.
ಮಳೆ ಹೀಗೆಯೇ ಮುಂದುವರೆದರೆ ಇತರ ಭಾಗಗಳಲ್ಲಿಯೂ ಕುಸಿಯುವ ಆತಂಕ ಎದುರಾಗಿದೆ. ಕೂಡಲೇ ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.