ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಏಕಾಏಕಿ ಆರ್ಭಟಿಸಿದ ಮಳೆಯಿಂದಾಗಿ ದೊಡ್ಡ ಅನಾಹುತ ಸೃಷ್ಟಿಯಾಗಿದೆ. ಭಾರಿ ಮಳೆಗೆ ಭಟ್ಕಳದ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದ್ದು, ಮನೆ ಮೇಲೆ ಗುಡ್ಡ ಕುಸಿದು ಮನೆಯಲ್ಲಿದ್ದ ತಾಯಿ ಮಕ್ಕಳು ಸೇರಿ ನಾಲ್ವರು ನಾಪತ್ತೆಯಾಗಿದ್ದಾರೆ.
ಸೋಮವಾರ ಸಂಜೆಯಿಂದ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆವರೆಗೂ ಮುಂದುವರಿದ ಪರಿಣಾಮ ಭಟ್ಕಳ ಪಟ್ಟಣ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮಣ್ಣಕುಳ್ಳಿ, ಚೌಥನಿ ಮೂಡಳ್ಳಿ, ಮೂಡಭಡ್ಕಳ, ಮುಟ್ಟಳ್ಳಿ, ಮುಂಡೊಳ್ಳಿ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಇನ್ನು ಹಲವು ಪ್ರದೇಶಗಳಿಗೆ ನೀರು ನುಗ್ಗತೊಡಗಿದೆ.
ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ನಾಪತ್ತೆ?ಇನ್ನೂ ಭಾರಿ ಮಳೆಗೆ ಮುಟ್ಟಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಮನೆಯಲ್ಲಿ ಮಲಗಿದ್ದ ನಾಲ್ಕು ಮಂದಿ ಸಿಲುಕಿಕೊಂಡಿದ್ದಾರೆ. ಮನೆ ಸಂಪೂರ್ಣ ಕುಸಿತವಾಗಿದ್ದು, ಮನೆಯ ಅಡಿ ಯಜಮಾನಿ ಲಕ್ಷ್ಮಿ ನಾರಾಯಣ ನಾಯ್ಕ (60), ಮಗಳು ಲಕ್ಷ್ಮಿ ನಾಯ್ಕ (45), ಮಗ ಅನಂತ ನಾರಾಯಣ ನಾಯ್ಕ (38), ಹಾಡುವಳ್ಲಿ ಬಡಬಾಗಿಲಿನ ತಂಗಿ ಮಗ ಪ್ರವೀಣ್ ರಾಮಕೃಷ್ಣ ನಾಯ್ಕ (16) ಮನೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಗಾಗಲೇ ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಸ್ಥಳಕ್ಕೆ ಜೆಸಿಬಿ ಹೋಗಲು ಜಾಗ ಇಲ್ಲದ ಕಾರಣ ಜನರೇ ಕಾರ್ಯಾಚರಣೆಗೆ ಇಳಿದಿದ್ದು, ಜೆಸಿಬಿ ಕೂಡ ಕಾರ್ಯಾಚರಣೆಗೆ ಬಳಸಲು ಅಧಿಕಾರಿಗಳು ಪ್ರಯತ್ನ ನಡೆಸಲಾಗುತ್ತಿದೆ.
ಇನ್ನು ಭಟ್ಕಳ ಪಟ್ಟಣ ಸಂಪೂರ್ಣ ಮುಳುಗಡೆಯಾಗಿ ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಹೋಗುತ್ತಿದೆ. ಎದೆಮಟ್ಟದ ನೀರು ತುಂಬಿಕೊಂಡಿದ್ದು ನೂರಾರು ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ. ಇನ್ನು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಜಲಾವೃತಗೊಂಡ ಕಾರಣ ವಾಹನ ಸಂಚಾರ ಅಸಾಧ್ಯವಾಗಿರುವ ಕಾರಣ ಭಟ್ಕಳ ಕಡೆ ಪ್ರಯಾಣ ಬೆಳೆಸದಂತೆ ಜಿಲ್ಲಾಧಿಕಾರಿ ಮುಲ್ಲೇ ಮುಹಿಲನ್ ಸೂಚಿಸಿದ್ದಾರೆ.