ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯೂ ಭಾನುವಾರ ಕೂಡ ಅಬ್ಬರಿಸಿದೆ. ಗಾಳಿ ಸಹಿತ ಮಳೆಗೆ ರಸ್ತೆ, ಮನೆ ಸೇರಿದಂತೆ ಹಲವೆಡೆ ಮರಗಳು ಬಿದ್ದು ಅಪಾರ ಹಾನಿ ಸಂಭವಿಸಿದೆ. ಮುಂದಿನ ದಿನಗಳಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ನಾಳೆ ಕೂಡ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ ಜಿಲ್ಲೆಯಲ್ಲಿ ನದಿಗಳು ಹಳ್ಳಗಳು ಉಕ್ಕಿ ಹರಿಯುತ್ತಿರುವ ಕಾರಣ ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಈ ಕಾರಣದಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತೆ ಕ್ರಮವಾಗಿ ಅಂಗನವಾಡಿ, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಹೊನ್ನಾವರದಲ್ಲಿ ಪ್ರವಾಹ:ಹೊನ್ನಾವರ ಹಾಗೂ ಘಟ್ಟದ ಮೇಲ್ಭಾಗದ ಸಿದ್ದಾಪುರ ಭಾಗದಲ್ಲಿ ವ್ಯಾಪಕ ಮಳೆ ಬಿದ್ದ ಕಾರಣ ಶರಾವತಿ ಉಪನದಿಗಳಾದ ಭಾಸ್ಕೇರಿ ಹಾಗೂ ಗುಂಡಬಾಳ ಹಳ್ಳಗಳು ಮೈದುಂಬಿ ಹರಿಯುತ್ತಿದ್ದು, ಇದೀಗ ಈ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನದಿ ಪಾತ್ರದ 10 ಕ್ಕೂ ಹೆಚ್ಚು ಕುಟುಂಬದ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ.
ಇನ್ನು ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ ನದಿಗಳು ಪ್ರಮಾಣ ಮೀರಿ ಹರಿಯುತ್ತಿರುವ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗ ತೊಡಗಿದೆ. ಇದೇ ರೀತಿ ಮಳೆ ಮುಂದುವರಿದಲ್ಲಿ ಅಂಕೋಲಾ, ಹೊನ್ನಾವರ, ಕಾರವಾರದ ಆಸ್ನೋಟಿ, ಕದ್ರಾ ಭಾಗದಲ್ಲಿ ಮನೆಗಳಿಗೆ ನೆರೆ ಬರುವ ಆತಂಕ ಎದುರಾಗಿದೆ. ಯಲ್ಲಾಪುರದಲ್ಲಿ ಗಂಗಾವಳಿ ನದಿ ನೀರಿನಿಂದ ಪಣಸಗುಳಿ ಸೇತುವೆ ಜಲಾವೃತಗೊಂಡಿದೆ. ಇದರಿಂದ ಹೆಗ್ಗಾರ- ಗುಳ್ಳಾಪುರ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹಳಿಯಾಳ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಹಳಿಯಾಳ-ಚಬ್ಬಲಗೇರಿ ಸಂಪರ್ಕ ಸೇತುವೆ ತುಂಬಿ ಹರಿಯುತ್ತಿರುವ ಕಾರಣ ಸಂಪರ್ಕ ಕಡಿತ ವಾಗಿದೆ. ಜನರು ಖಾಮಡೊಳ್ಳಿ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.