ಕಾರವಾರ: ರಾಜ್ಯದ ಕರಾವಳಿಯಲ್ಲಿ ಸಾಮಾನ್ಯ ದಿನಗಳಲ್ಲೇ ತಡೆದುಕೊಳ್ಳಲಾಗದಷ್ಟು ಸೆಕೆ ಇರುತ್ತದೆ. ಬೇಸಿಗೆ ಕಾಲದಲ್ಲಂತೂ ಇಲ್ಲಿನ ಬಿಸಿಲಿನ ಧಗೆಯನ್ನು ಸಹಿಸಿಕೊಳ್ಳೋದು ಸಾಧ್ಯವೇ ಇಲ್ಲ. ಅಷ್ಟು ಪ್ರಮಾಣದಲ್ಲಿ ಸೂರ್ಯನ ಝಳ ಹೆಚ್ಚಾಗಿರುತ್ತದೆ. ಅದರಲ್ಲೂ ಈ ಬಾರಿಯಂತೂ ಮಾರ್ಚ್ ಅಂತ್ಯದಿಂದಲೇ ಬೇಸಿಗೆ ಅಬ್ಬರ ಆರಂಭವಾಗಿದ್ದು, ಕರಾವಳಿ ಜನತೆ ತತ್ತರಿಸುವಂತಾಗಿದೆ.
ಬಗೆ ಬಗೆಯ ಫ್ಲೇವರ್‌ನ ಐಸ್ ಕ್ರೀಂಗಳು, ರಾಶಿ ಹಾಕಲಾಗಿರುವ ಎಳನೀರು, ನಿಂಬೆಹಣ್ಣಿನ ಶರಬತ್. ಅಬ್ಬಾ ಇದೆಲ್ಲ, ನೋಡ್ತಿದ್ರೆ ಯಾರಿಗೇ ಆಗ್ಲಿ ಒಂದು ಕ್ಷಣ ನಿಂತು ದೇಹ ತಂಪು ಮಾಡಿಕೊಳ್ಳೋಣ ಅಂತಾ ಅನ್ನಿಸದೇ ಇರೋದಿಲ್ಲ. ಸದ್ಯ ಉತ್ತರಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭವಾದಾಗಿನಿಂದ ಸೂರ್ಯನ ತಾಪ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಸಮುದ್ರತೀರಕ್ಕೆ ಹೊಂದಿಕೊಂಡಿರುವ ಕರಾವಳಿಯ ತಾಲೂಕುಗಳಲ್ಲಂತೂ ಸೆಕೆಯ ಅಬ್ಬರ ಹೇಳತೀರದಾಗಿದೆ.
ಪರಿಣಾಮ ಜನರು ಸೂರ್ಯನ ಝಳದಿಂದ ತಪ್ಪಿಸಿಕೊಳ್ಳುವ ಉಪಾಯಗಳತ್ತ ಮುಖಮಾಡುತ್ತಿದ್ದಾರೆ. ಸದ್ಯ ಜಿಲ್ಲೆಯ ಕರಾವಳಿ ಭಾಗದಲ್ಲಿ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜನ ಸೂರ್ಯನ ತಾಪ ತಾಳಲಾರದೇ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಲಿಂಬು ಶರಬತ್, ಲಸ್ಸಿಯಂತಹ ತಂಪು ಪಾನೀಯಗಳಿಗೆ ಹೆಚ್ಚು ಬೇಡಿಕೆಯಿದ್ದು ಜನರು ಐಸ್‌ಕ್ರೀಂ ಅಂಗಡಿಗಳಿಗೂ ಮುಗಿಬೀಳುತ್ತಿದ್ದಾರೆ.
ಮನೆಯಿಂದ ಹೊರ ಬಂದರೆ ಬಿಸಿಗಾಳಿ, ನೆತ್ತಿಸುಡುವ ಬಿಸಿಲು, ರಸ್ತೆಯಲ್ಲಿ ಓಡಾಡೋಣವೆಂದರೆ ಬಿಸಿಲಿನ ಧಗೆ. ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೂ ಕನಿಷ್ಠ 36 ರಿಂದ 38 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಲಿನ ತಾಪ ಇರುತ್ತದೆ. ಹೀಗಾಗಿ ಈ ಉಷ್ಣತೆಯನ್ನು ತಾಳಲಾರದೇ ಮಧ್ಯಾಹ್ನದ ಹೊತ್ತಿಗೆ ಜನರು ಮನೆಯಿಂದ ಹೊರಗಡೆ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಏನೇ ಕೆಲಸ ಕಾರ್ಯಗಳಿದ್ದರೂ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಮುಗಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದಾರೆ.