ಭಟ್ಕಳ(ಉತ್ತರ ಕನ್ನಡ): ತಾಲೂಕಿನ ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದಿಂದ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ರಮೇಶ್ ರಾವ್ (ಡಿಎಂಒ) ಬಂದರು ಸುತ್ತಮುತ್ತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಮೊದಲು ಭಟ್ಕಳ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಮತ್ತು ಬಲಪಡಿಸಲು ಸಿಬ್ಬಂದಿಗೆ ತಿಳಿಸಿದರು. ಮಾವಿನಕುರ್ವೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 1172 ಮನೆಗಳು ಹಾಗೂ ಗ್ರಾಮೀಣ ಮತ್ತು ನಗರ ಭಾಗದಲ್ಲಿ 3 ದಿನಗಳೊಳಗಾಗಿ ಸರ್ವೇ ಕಾರ್ಯ ಮುಗಿಸಬೇಕು. ಮನೆಗಳಿಗೆ ತೆರಳಿ ವೇಳೆ ಸ್ವಚ್ಛತೆ ಹಾಗೂ ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದರ ಜತೆಗೆ ನಿಂತ ಕೊಳಚೆ ನೀರಿಗೆ ಹೈಪೋಕ್ಲೋರೈಟ್ ಸೊಲ್ಯೂಷನ್ಸ್ ಸಿಂಪಡಿಸುವಂತೆ ತಿಳಿಸಿದರು.
ಬಳಿಕ ಸಭೆ ಮುಗಿಸಿ ನೇರವಾಗಿ ತಾಲೂಕಿನ ಆರೋಗ್ಯ ಇಲಾಖೆ ತಂಡದೊಂದಿಗೆ ಮಾವಿನ ಕುರ್ವೆ ದಕ್ಕೆಗೆ ತೆರಳಿ ಸಣ್ಣ ಸಣ್ಣ ಚರಂಡಿಯಲ್ಲಿ ನಿಂತ ನೀರಿಗೆ ಹೈಪೋಕ್ಲೋರೈಟ್ ಸೊಲ್ಯೂಷನ್ಸ್ ಸಿಂಪಡಿಸಿದರು. ಬಂದರ್ ಬೀಚ್ಗೆ ತೆರಳುವ ರಸ್ತೆ ಪಕ್ಕದಲ್ಲಿ ಕುಡಿಯಲು ಯೋಗ್ಯವಲ್ಲದ ಬಾವಿಯ ಪಕ್ಕದಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಸ್ಥಳೀಯ ಪಂಚಾಯಿತಿಗೆ ಬಾವಿಯನ್ನು ಮುಚ್ಚುವಂತೆ ಪತ್ರ ಬರೆಯಲು ಹೇಳಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, "ಭಟ್ಕಳದಲ್ಲಿ ಕಳೆದ ಹಲವಾರು ದಿನಗಳಿಂದ ನಗರ ಪ್ರದೇಶಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವುಗಳನ್ನೂ ಮಾಡಲಾಗಿದೆ. ಸದ್ಯ ಶಂಕಿತರ ಪ್ರಕರಣದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದು, ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಗ್ಯ ಸಿಬ್ಬಂದಿಗಳಾದ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರನ್ನು ಸೇರಿಸಿಕೊಂಡು ಶಂಕಿತ ಪ್ರಕರಣ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಮುಡಿಸುತ್ತಿದ್ದೇವೆ" ಎಂದು ತಿಳಿಸಿದರು.