ಶಿರಸಿ:ಕಳೆದ ಹಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ಬುಧವಾರ ತಡರಾತ್ರಿ ವಿಕೋಪಕ್ಕೆ ತಿರುಗಿದ್ದು, ಲಾಠಿ ಚಾರ್ಜ್ ನಡೆದಿದೆ. ಕಳೆದ 37 ದಿನಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳೆಗಾರರ ಪ್ರತಿಭಟನೆ ನಡೆಯುತ್ತಿದೆ. ಆರು ದಿನಗಳಿಂದ ಅಮರಣಾಂತ ಉಪವಾಸ ಮಾಡಲಾಗುತ್ತಿದೆ. ಆದರೆ ಕೆಲ ಕಬ್ಬು ಬೆಳೆಗಾರರು ಪೊಲೀಸ್ ಕಾವಲಿನೊಂದಿಗೆ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸಾಗಿಸಿದ್ದು ಕಲ್ಲು ತೂರಾಟಕ್ಕೆ ಕಾರಣವಾಯಿತು.
ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಲಾರಿಯೆದುರು ಅಡ್ಡಬಿದ್ದು ಕಬ್ಬು ಸಾಗಿಸದಂತೆ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಲಾರಿಗೆ ಕಲ್ಲು ಎಸೆದಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಬೀಸಿದ್ದಾರೆ.