ಕಾರವಾರ :ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಂಬಿಸಿ ಅವರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ವಂಚಕರ ತಂಡವೊಂದನ್ನು ಉತ್ತರಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೋಲಾರದ ವಸಂತ ನಗರದ ಅಶೋಕ ಎಂ.ಎನ್, ಅಸ್ಸೋಂ ಮೂಲದ ಬುಲ್ಲಿಯಾಂಗಿರ್ ಹಲಮ್, ತ್ರಿಪುರದ ದರ್ಟಿನ್ಬಿರ್ ಹಲಮ್, ಮಣಿಪುರದ ವಾರಿಂಗಮ್ ಪೂಂಗಶೊಕ್ ಬಂಧಿತ ಆರೋಪಿಗಳು.
ಕಳೆದ 7 ತಿಂಗಳ ಹಿಂದೆ ಹೊನ್ನಾವರ ಮೂಲದ ಯುವತಿಯೋರ್ವಳನ್ನು ಇಮೇಲ್ ಮೂಲಕ ಸಂಪರ್ಕಿಸಿದ ತಂಡವೊಂದು ಅಮೆರಿಕಾದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 57 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿತ್ತು. ಈ ಕುರಿತು ಯುವತಿ ಫೆ.10ರಂದು ಕಾರವಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಬರೋಬ್ಬರಿ ಅರ್ಧ ಕೋಟಿಗೂ ಹೆಚ್ಚು ಹಣ ಕಳೆದುಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹಾಗೂ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ ಬದರಿನಾಥ್ ಅವರು, ಸಿಇಎನ್ ಪೊಲೀಸ್ ಠಾಣೆಯ ಸಿಪಿಐ ಪಿ. ಸೀತಾರಾಮ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತನಿಖೆಗೆ ಸೂಚಿಸಿದ್ದರು. ಅದರಂತೆ ಬರೋಬ್ಬರಿ ಒಂದು ತಿಂಗಳು ಜಾಲಾಡಿದ ಪೊಲೀಸರು ನೈಜೀರಿಯಾ ಮೂಲದ ಗ್ಯಾಂಗ್ ಬೆಂಗಳೂರಿನಲ್ಲಿ ಇದ್ದು ಮೋಸ ಮಾಡಿರುವುದನ್ನು ಪತ್ತೆ ಹಚ್ಚಿದ್ದರು.