ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗುಳ್ಳಾಪುರ ಸೇತುವೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಕಳೆದ ಜುಲೈ 23ರಂದು ಅಪ್ಪಳಿಸಿದ ನೆರೆಯಬ್ಬರಕ್ಕೆ ದಶಕಗಳ ಸೇತುವೆ ತುಂಡಾಗಿ ನೆಲಕ್ಕಪ್ಪಳಿಸಿದ್ದು, ಇದ್ದ ಒಂದೇ ಒಂದು ಸಂಪರ್ಕ ಕೊಂಡಿಯೂ ತುಂಡಾಗಿ ಇದೀಗ ನಿತ್ಯ ಓಡಾಟಕ್ಕೆ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಗುಳ್ಳಾಪುರ ಗ್ರಾಮದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಕಳೆದ 25 ವರ್ಷಗಳ ಹಿಂದೆ ಸೇತುವೆ ನಿರ್ಮಿಸಲಾಗಿತ್ತು. ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು. ಕಳೆದ ವರ್ಷದ ನೆರೆಯಲ್ಲಿ ಈ ಸೇತುವೆ ಸಂಪೂರ್ಣ ನೀರಿನಿಂದ ಮುಚ್ಚಿ ಹೋಗಿತ್ತಾದರೂ ಹೆಚ್ಚಿನ ಹಾನಿ ಉಂಟಾಗಿರಲಿಲ್ಲ.
ಆದರೆ, ಈ ಬಾರಿಯ ಪ್ರವಾಹದಲ್ಲಿ ಸೇತುವೆ ಮುಚ್ಚಿ ಹೆದ್ದಾರಿವರೆಗೂ ನೀರು ತುಂಬಿದ್ದು, ನೀರಿನ ರಭಸಕ್ಕೆ ಸೇತುವೆಯ ಮಧ್ಯಭಾಗ ತುಂಡಾಗಿ ನೆಲಕಚ್ಚಿದೆ. ಇದರಿಂದಾಗಿ ಹತ್ತಾರು ಗ್ರಾಮಗಳ ಸಂಪರ್ಕ ಕೊಂಡಿ ಕಳಚಿ ದ್ವೀಪಗಳಾಗಿವೆ.
ಅಲ್ಲದೇ, ಎರಡು ದಶಕಗಳ ಬಳಿಕ ಮತ್ತೆ ದೋಣಿ ಮೇಲೆ ಓಡಾಡಬೇಕಾದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ. ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ಗಂಗಾವಳಿ ನದಿ ಏಕಾಏಕಿ ಉಕ್ಕಿ ಹರಿದಿದ್ದು, ನೀರಿನ ರಭಸಕ್ಕೆ ಇಡೀ ಗ್ರಾಮವೇ ನಲುಗಿ ಹೋಗಿದೆ.