ಕರ್ನಾಟಕ

karnataka

By

Published : Jul 22, 2023, 7:04 AM IST

Updated : Jul 22, 2023, 1:29 PM IST

ETV Bharat / state

ಉತ್ತರ ಕನ್ನಡ: ಸರ್ವರ್ ಸಮಸ್ಯೆಯಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಪರದಾಟ.. 2 ದಿನದಲ್ಲಿ ಕೇವಲ 2 ಸಾವಿರ ಅರ್ಜಿ ಸಲ್ಲಿಕೆ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾದ ಬೆನ್ನಲ್ಲೇ ಸರ್ವರ್ ವಿಘ್ನ ಎದುರಾಗಿದೆ. ಹೀಗಾಗಿ, ಉತ್ತರ ಕನ್ನಡದಲ್ಲಿ ಎರಡು ದಿನದಲ್ಲಿ ಕೇವಲ 2 ಸಾವಿರ ಅರ್ಜಿ ಮಾತ್ರ ಸಲ್ಲಿಕೆಯಾಗಿದೆ.

gruha lakshmi
ಗೃಹಲಕ್ಷ್ಮಿ

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಸರ್ವರ್ ವಿಘ್ನ

ಕಾರವಾರ : ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿಗೆ ಅರ್ಜಿ ಪಡೆಯಲಾಗುತ್ತಿದೆ. ಆದರೆ, ಸರ್ವರ್ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಕೇವಲ 2 ಸಾವಿರ ಮಾತ್ರ ಅರ್ಜಿ ಸಲ್ಲಿಕೆಯಾಗಿದ್ದು, ಬಹುತೇಕ ಕಡೆ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸರ್ವರ್ ಸಮಸ್ಯೆಯಿಂದಾಗಿ ಜಿಲ್ಲೆಯಲ್ಲಿ ಮೊದಲ ದಿನ ಕೇವಲ 873 ಮಂದಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗಿತ್ತು. ಮೊನ್ನೆ ಅರ್ಜಿ ಸಲ್ಲಿಕೆ ಸಾಧ್ಯವಾಗದವರು ಸೇರಿದಂತೆ ನಿನ್ನೆ ಮೆಸೇಜ್ ಮೂಲಕ ಮಾಹಿತಿ ಪಡೆದವರು ಸೇವಾ ಸಿಂಧು ಕೇಂದ್ರಗಳಿಗೆ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದರು. ಆದರೆ, ಶುಕ್ರವಾರ ಕೂಡ ಅದೇ ಸಮಸ್ಯೆ ಎದುರಾದ‌ ಪರಿಣಾಮ ಇಡೀ ದಿನ ಕೇಂದ್ರಗಳಲ್ಲಿ ಕಾಯುವ ಪರಿಸ್ಥಿತಿ ಉಂಟಾಯಿತು.

ಜಿಲ್ಲೆಯಲ್ಲಿ ಅರ್ಜಿ ಸಲ್ಲಿಕೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ 207 ಗ್ರಾಮ ಒನ್ ಕೇಂದ್ರ, 229 ಬಾಪೂಜಿ ಸೇವಾ ಕೇಂದ್ರ, 21 ಕರ್ನಾಟಕ ಒನ್ ಕೇಂದ್ರ, 31 ನಗರ ಸ್ಥಳೀಯ ಸಂಸ್ಥೆಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೆ ದಿನವೊಂದಕ್ಕೆ 60 ಅರ್ಜಿ ಮಾತ್ರ ಸ್ವೀಕಾರದ ಗುರಿ ನಿಗದಿಪಡಿಸಲಾಗಿದೆ. ಆದರೆ, ಕಾರವಾರ ಸೇರಿದಂತೆ ಎಲ್ಲೆಡೆ ಸರ್ವರ್ ಸಮಸ್ಯೆ ಎದುರಾದ ಕಾರಣ ಬೆಳಗ್ಗೆಯಿಂದ ಸಂಜೆವರೆಗೂ ಕಾದು ಕೆಲವರು ಅರ್ಜಿ ಸಲ್ಲಿಕೆ ಮಾಡುವಂತಾಯಿತು.

"ಅರ್ಜಿ ಸಲ್ಲಿಕೆಗೆ ಸಂದೇಶ ಬಂದ ಕಾರಣ ಬೆಳಗ್ಗೆಯೇ ಬಂದಿದ್ದರೂ ಮಧ್ಯಾಹ್ನವಾದರೂ ಆಗಿಲ್ಲ. ನನ್ನಂತೆ ಹಲವರು ಬಂದು ವಾಪಸ್​ ಹೋಗುತ್ತಿದ್ದಾರೆ. ಬೇಗ ಅರ್ಜಿ ಸಲ್ಲಿಸಿ ಕೆಲಸಕ್ಕೆ ತೆರಳಬೇಕೆಂದುಕೊಂಡಿದ್ದರು ಸರ್ವರ್ ಸಮಸ್ಯೆ ಎನ್ನುತ್ತಿದ್ದಾರೆ. ಆರಂಭದಲ್ಲಿ ಸಮಸ್ಯೆ ಆಗಿರಬಹುದು. ಆದರೆ, ಕೂಡಲೇ ಅದನ್ನು ಸರಿಪಡಿಸಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು" ಎಂದು ಅರ್ಜಿ ಸಲ್ಲಿಕೆಗೆ ಆಗಮಿಸಿದ್ದ ಗಿರಿಧರ್ ಗುನಗಿ ಒತ್ತಾಯಿಸಿದರು.

"ಅರ್ಜಿ ಸಲ್ಲಿಕೆಗೆ ಮೂರು ಲಿಂಕ್ ನೀಡಿದ್ದಾರೆ. ಆದರೆ, ಸರ್ವರ್ ಯಾವುದು ಕೂಡ ಒಪನ್ ಆಗುತ್ತಿಲ್ಲ. ಮೊಬೈಲ್ ಆಪ್​ ಕೂಡ ನೀಡಿದ್ದಾರೆ. ಇದರಿಂದ ಫಲಾನುಭವಿಗಳಿಗೆ ಒಟಿಪಿ ಹೋಗುತ್ತಿಲ್ಲ. ಎಲ್ಲರೂ ಬಂದು ಕೇಳಿ ತೆರಳುತ್ತಿದ್ದಾರೆ. ವಯಸ್ಸಾದವರನ್ನು ಸ್ವಲ್ಪ ಹೊತ್ತು ಕೂರಿಸಿ ಸಾಧ್ಯವಾದಷ್ಟು ಅರ್ಜಿ ಸಲ್ಲಿಕೆ ಮಾಡಿ ಕಳುಹಿಸುತ್ತಿದ್ದೇವೆ. ಅರ್ಜಿ ಸಲ್ಲಿಕೆ ಕೇವಲ ಒಂದೆರಡು ನಿಮಿಷದಲ್ಲಿ ಮುಗಿದು ಹೋಗುತ್ತದೆ. ಆದರೆ, ಸರ್ವರ್ ಸರಿಯಾಗಿ ಕೆಲಸ ಮಾಡದ ಕಾರಣ ಗಂಟೆಗೆ 4 ಅಥವಾ 5 ಅರ್ಜಿಗಳ ಸಲ್ಲಿಕೆ ಮಾತ್ರ ಸಾಧ್ಯವಾಗುತ್ತಿದೆ" ಎನ್ನುತ್ತಾರೆ ಕರ್ನಾಟಕ ಒನ್ ಇನ್ ಕೇಂದ್ರದ ಸಿಬ್ಬಂದಿ ಸೌಂದರ್ಯ ನಾಯ್ಕ.

ಇದನ್ನೂ ಓದಿ:ಗೃಹಲಕ್ಷ್ಮಿಗೆ ನೋಂದಣಿ : ಮೈಸೂರಿನ ಕೆಲವು ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ಮಹಿಳೆಯರ ಪರದಾಟ

ನಿತ್ಯ ಸಂಜೆ ಅರ್ಜಿ ಸಲ್ಲಿಕೆಗೆ ಅವಕಾಶ :ಮೊಬೈಲ್ ಸಂಖ್ಯೆಗೆ ಬಂದ ಮಾಹಿತಿ ಆಧರಿಸಿ ಆಯಾ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಎಸ್‌ಎಂಎಸ್ ಬಾರದೇ ಇದ್ದಲ್ಲಿ ಗ್ರಾಮೀಣ ಪ್ರದೇಶದವರು ಗ್ರಾಮ ಒನ್ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಇಲ್ಲವೇ ನಗರ ಪ್ರದೇಶದವರು ಕರ್ನಾಟಕ ಒನ್, ಸ್ಥಳೀಯ ನಗರಾಡಳಿತ ಸಂಸ್ಥೆಯ ಕಚೇರಿಗಳಲ್ಲಿ ಸಂಜೆ 5 ರಿಂದ 7 ಗಂಟೆಯೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ.

"ಉತ್ತರಕನ್ನಡ ಜಿಲ್ಲೆಯಲ್ಲಿ 4.23 ಲಕ್ಷ ಫಲಾನುಭವಿಗಳಿದ್ದಾರೆ. 488 ಸೇವಾ ಸಿಂಧು ಕೇಂದ್ರಗಳಲ್ಲಿ ಪ್ರತಿನಿತ್ಯ ಒಂದು ಕೇಂದ್ರದಲ್ಲಿ 60 ಫಲಾನುಭವಿಗಳಿಂದ ಅರ್ಜಿ ಪಡೆಯಲಾಗುತ್ತಿದೆ. ಆದರೆ, ಸರ್ವರ್ ಸಮಸ್ಯೆಯಿಂದ ಎರಡು ದಿನದಿಂದ ಸುಮಾರು 2 ಸಾವಿರ ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಮುಂದೆ ಸಮಸ್ಯೆ ಬಗೆಹರಿಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಗೆ ಕ್ರಮವಹಿಸಲಾಗುವುದು ಎಂದು ಗ್ರಹಲಕ್ಷ್ಮಿ ಯೋಜನೆ ಪ್ರೋಗ್ರಾಮ್ ಆಫೀಸರ್ ವಿರೂಪಾಕ್ಷ ಪಾಟೀಲ್ ತಿಳಿಸಿದರು.

ಇದನ್ನೂ ಓದಿ:ಗೃಹಲಕ್ಷ್ಮಿ ನೋಂದಣಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ; ಆಗಸ್ಟ್‌ 16ರಿಂದ ಯಜಮಾನಿಯ ಖಾತೆಗೆ ₹2,000 ಜಮೆ

Last Updated : Jul 22, 2023, 1:29 PM IST

ABOUT THE AUTHOR

...view details