ಕಾರವಾರ (ಉ.ಕ): ಗಣೇಶ ಚತುರ್ಥಿಗೆ ಇನ್ನೇನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಸದ್ಯ ಸಡಗರ ಸಂಭ್ರಮದಿಂದ ಆಚರಿಸುವ ಗಣೇಶನ ಹಬ್ಬಕ್ಕೆ ಕಳೆದ ವರ್ಷದಿಂದ ಕೊರೊನಾ ಬ್ರೇಕ್ ಹಾಕಿದೆ. ಆದರೂ ಸಂಪ್ರದಾಯದಂತೆ ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಂತಹ ಗಣೇಶ ಹಬ್ಬದ ಬಗ್ಗೆ ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಲು ಮೀನಾಮೇಷ ಎಣಿಸುತ್ತಿರುವುದು ಇದೀಗ ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.
ಕಳೆದ ವರ್ಷದಿಂದ ಸರ್ಕಾರ ಹೊರಡಿಸುವ ಮಾರ್ಗಸೂಚಿಯಂತೆ ಸರಳವಾಗಿ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ಇದೀಗ ಹಬ್ಬಕ್ಕೆ ಒಂದು ವಾರ ಮಾತ್ರ ಬಾಕಿ ಉಳಿದಿದ್ದು, ಈವರೆಗೂ ಸರ್ಕಾರ ಗಣೇಶ ಚತುರ್ಥಿ ಆಚರಣೆಗೆ ಸ್ಪಷ್ಟ ಆದೇಶ ಹೊರಡಿಸದಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಬಹುತೇಕರು ಜೇಡಿ ಮಣ್ಣಿನ ಮೂಲಕ ಮೂರ್ನಾಲ್ಕು ತಿಂಗಳುಗಳಿಂದ ಗಣಪತಿಗಳನ್ನು ತಯಾರಿಸಿಟ್ಟಿದ್ದಾರೆ. ಹಬ್ಬ ಆಚರಿಸಲು ಅನುಮತಿ ಬಗೆಗಿನ ಗೊಂದಲದಿಂದಾಗಿ ಮೂರ್ತಿಗಳ ಖರೀದಿಗೆ ಮುಂಗಡ ಹಣ ನೀಡಲು ಜನರು ಮುಂದಾಗುತ್ತಿಲ್ಲ. ಸರ್ಕಾರ ಕೊನೆಗಳಿಗೆಯಲ್ಲಿ ಆಚರಣೆಗೆ ಬ್ರೇಕ್ ಹಾಕಿದರೆ ತಯಾರಕರು ನಷ್ಟ ಅನುಭವಿಸಬೇಕಾಗುತ್ತದೆ.