ಕಾರವಾರ: ಹೊನ್ನಾವರದ ಯುವಕ ಪರೇಶ್ ಮೇಸ್ತಾ ಸಾವಿನ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣಗಳನ್ನು ಸರ್ಕಾರ ಇಂದು ಸಚಿವ ಸಂಪುಟ ಸಭೆಯಲ್ಲಿ ಹಿಂದಕ್ಕೆ ಪಡೆಯಲಾಗಿದೆ. ಹೀಗಾಗಿ ಜಿಲ್ಲೆಯ ಸಾವಿರಾರು ಯುವಕರು ನಿಟ್ಟುಸಿರು ಬಿಟ್ಟಿದ್ದಾರೆ.
2017ರ ಡಿಸೆಂಬರ್ನಲ್ಲಿ ಪರೇಶ್ ಮೇಸ್ತಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಈತನ ಮೃತದೇಹ ಮೂರು ದಿನಗಳ ಬಳಿಕ ಪಟ್ಟಣದ ಕೆರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಪ್ರಕರಣದಿಂದ ಕೆರಳಿದ ಜನರು ಆರೋಪಿಗಳ ಬಂಧನಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ಮಾತ್ರವಲ್ಲದೇ ಪ್ರಕರಣ ವಿಕೋಪಕ್ಕೆ ತಿರುಗಿ ಕಾರವಾರ, ಕುಮಟಾ, ಹೊನ್ನಾವರ ಹಾಗೂ ಶಿರಸಿಯಲ್ಲಿ ಎಂದೂ ಕಂಡರಿಯದ ರೀತಿ ಪ್ರತಿಭಟನೆ ನಡೆದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕುಮಟಾ ಪಟ್ಟಣದಲ್ಲಿ ಐಜಿಪಿ ವಾಹನಕ್ಕೆ ಬೆಂಕಿ ಹಚ್ಚಲಾಗಿತ್ತು. ಪರಿಣಾಮ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸೇರಿದಂತೆ ಪ್ರಚೋದನೆ ನೀಡಿದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಆದರೆ, ಈ ವೇಳೆ ಅಮಾಯಕರ ಮೇಲೆ ಸರ್ಕಾರ ಪ್ರಕರಣ ದಾಖಲಿಸಿರುವ ಆರೋಪ ಕೇಳಿಬಂದಿತ್ತು. ಬಳಿಕ ಘೋಷಣೆಯಾದ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪರೇಶ್ ಮೇಸ್ತಾ ಪ್ರಕರಣ ಹಿಂಪಡೆಯುವುದಾಗಿ ಭರವಸೆ ನೀಡಿತ್ತು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ಕರಾವಳಿ ಭಾಗದ ಶಾಸಕರಾದ ರೂಪಾಲಿ ನಾಯ್ಕ, ದಿನಕರ್ ಶೆಟ್ಟಿ ಹಾಗೂ ಬಿಜೆಪಿ ನಾಯಕರು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ಅದರಂತೆ ಸರ್ಕಾರ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಯುವಕರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಆದೇಶಿಸಿದೆ. ಈ ಹಿನ್ನಲೆ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಕರಣ ವಾಪಸ್ ತೆಗೆದುಕೊಳ್ಳುವಲ್ಲಿ ಸಹಕರಿಸಿದ ಎಲ್ಲರಿಗೂ ಶಾಸಕಿ ರೂಪಾಲಿ ನಾಯ್ಕ ಧನ್ಯವಾದ ಸಲ್ಲಿಸಿದ್ದಾರೆ.