ಕಾರವಾರ:ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಜನರು ತಮ್ಮ ಮನೆ-ಜಮೀನು, ಬಟ್ಟೆ-ಪಾತ್ರೆ ಹೀಗೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇದರೊಂದಿಗೆ ಮೌಲ್ಯಯುತ ದಾಖಲೆ, ಇನ್ಶೂರೆನ್ಸ್ ಪತ್ರ, ಮಾರ್ಕ್ ಕಾರ್ಡ್, ವಾಹನದ ದಾಖಲೆಗಳು ಕೂಡ ನೀರಲ್ಲಿ ಕೊಚ್ಚಿ ಹೋಗಿದ್ದು, ಜನ ಹಾಗೂ ವಿದ್ಯಾರ್ಥಿಗಳನ್ನು ತೀರಾ ಆತಂಕಕ್ಕೆ ಒಳಗಾಗುವಂತಾಗಿತ್ತು. ಆದರೆ ಇಂಥವರಿಗೆ ಮರಳಿ ದಾಖಲೆಗಳನ್ನು ಒದಗಿಸಲು ಉತ್ತರಕನ್ನಡ ಜಿಲ್ಲಾಡಳಿತ ಹೊಸ ಯೋಜನೆ ರೂಪಿಸಿದೆ.
ದಾಖಲೆಗಳನ್ನು ಮರಳಿ ಒದಗಿಸಲು ಸರ್ಕಾರ ಪ್ಲ್ಯಾನ್ ಜನರ ಸ್ಥಿತಿಯನ್ನು ಅರಿತುಕೊಂಡಿರುವ ಸರ್ಕಾರ, ದಾಖಲೆಗಳನ್ನು ಮರು ನಿರ್ಮಾಣ ಮಾಡಿಕೊಡುವ ವ್ಯವಸ್ಥೆ ಕೈಗೊಂಡಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅಸಿಸ್ಟೆಂಟ್ ಕಮಿಷನರ್(ಎಸಿ) ನೇತೃತ್ವದಲ್ಲಿ ಏಕಗವಾಕ್ಷಿ ಯೋಜನೆಯ ವ್ಯವಸ್ಥೆಯಡಿ ಕಳೆದುಹೋದ ದಾಖಲೆಗಳನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಜನರಿಗೆ ಸುಲಭವಾಗಿ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ಈ ಏಕಗವಾಕ್ಷಿ ಯೋಜನೆಯಡಿ ಜನರು ಕಳೆದುಕೊಂಡ ದಾಖಲೆಗಳನ್ನು ಮರು ಪಡೆಯಲು ಅರ್ಜಿ ಸಲ್ಲಿಸಬೇಕೆಂದೇನಿಲ್ಲ. ಆಯಾ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ನೀಡುವ ಅರ್ಜಿಯ ಫಾರ್ಮೆಟ್‌ನಲ್ಲಿ ತಾವು ಕಳೆದುಕೊಂಡ ದಾಖಲೆಗಳೇನು ಎಂದು ಟಿಕ್ ಮಾಡಿದರೆ, ಜಿಲ್ಲಾ ಮಟ್ಟದಲ್ಲಿ ಒದಗಿಸಬೇಕಾದ ದಾಖಲೆಗಳನ್ನು ಕೂಡಲೇ ವಿತರಿಸುವ ಕೆಲಸ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ವಿಶ್ವವಿದ್ಯಾನಿಲಯಗಳ ಜತೆ ಮಾತನಾಡಿ ವಿದ್ಯಾರ್ಥಿಗಳಿಗೆ ಅವರ ಮಾರ್ಕ್ ಕಾರ್ಡ್‌ಗಳನ್ನು ಮರಳಿ ಸಿಗುವಂತೆ ಮಾಡಲಾಗುತ್ತಿದೆ. ಇದರಿಂದ ಜನ ಪ್ರತಿ ದಾಖಲೆಗಳಿಗಾಗಿ ತಿಂಗಳುಗಟ್ಟಲೇ ಅಲೆಯುವ ಸಂಕಟ ತಪ್ಪಲಿದೆ.
ಸರ್ಕಾರ ಜನರ ಕಷ್ಟಗಳಿಗೆ ಸ್ಪಂದಿಸಲು ಪ್ರಾರಂಭಿಸಿದ್ದು, ಜನರು ಕಳೆದುಕೊಂಡದ್ದನ್ನು ಮರು ಪೂರೈಕೆ ಮಾಡಲು ವ್ಯವಸ್ಥೆ ಕಲ್ಪಿಸುತ್ತಿದೆ. ಸಂತ್ರಸ್ತರು ಕೂಡಾ ಇದರ ಬಗ್ಗೆ ಅರಿತು ಕೂಡಲೇ ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.