ಶಿರಸಿ:ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರಿಗೆ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಾದರಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 1.5 ಲಕ್ಷ ರೂ. ಖರ್ಚಾಗುವ ಆಪರೇಷನ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆದಿದ್ದು, ಚಿಕಿತ್ಸೆಗೆ ಒಳಗಾದ ಮಹಿಳೆ ಕ್ಷೇಮವಾಗಿದ್ದಾಳೆ.
ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರು ಮೂರುವರೆ ತಾಸು ಆಪರೇಷನ್ ನಡೆಸಿ, ಮಹಿಳೆಯ ಮೂತ್ರನಾಳ ಕಸಿಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಬೆಳಗಾವಿಯ ಮಹಿಳೆ ಡೆಲಿವರಿ ಸಂದರ್ಭದಲ್ಲಿ ಸಿಜೇರಿನ್ ಮಾಡಿಸಿದ್ದು, ಆಗ ಮೂತ್ರ ನಾಳಕ್ಕೆ ಘಾಸಿಯಾಗಿತ್ತು. 6 ತಿಂಗಳಿಂದ ನಿಯಂತ್ರಣ ಇಲ್ಲದೇ ಮೂತ್ರ ಸೋರಿಕೆ ಆಗುತ್ತಿತ್ತು. ಗಾಬರಿಗೊಂಡ ಮಹಿಳೆಯು ಹಲವು ಕಡೆ ತೋರಿಸಿದ್ದರೂ ಪ್ರಯೋಜನ ಆಗದೇ ಸಂಕಷ್ಟದಲ್ಲಿದ್ದಳು. ನಂತರ ಸರ್ಕಾರಿ ಆಸ್ಪತ್ರೆ ಸಂಪರ್ಕಿಸಿ ಚಿಕಿತ್ಸೆ ಪಡೆದು ಈಗ ಸುರಕ್ಷಿತವಾಗಿದ್ದಾಳೆ.
ಮಹಿಳೆಗೆ ಯಾರೋ ಕೊಟ್ಟ ಮಾಹಿತಿಯಂತೆ ಶಿರಸಿ ಆಸ್ಪತ್ರೆಯ ಮೂತ್ರಜನಕಾಂಗ ತಜ್ಞ ಡಾ.ಗಜಾನನ ಭಟ್ ಸಂಪರ್ಕಿಸಲು ಶಿರಸಿ ಆಸ್ಪತ್ರೆಗೆ ಬಂದರು. ನಂತರ ಡಾ.ಗಜಾನನ ಭಟ್ಟರು ಸರ್ಕಾರಿ ಆಸ್ಪತ್ರೆ ವೈದ್ಯರಾದ ಬಸವಗೌಡ, ಡಾ.ಪದ್ಮಿನಿ, ಡಾ.ರೇವಣಕರ, ಡಾ.ನೇತ್ರಾವತಿ, ನರ್ಸ್ ರಾಣಿ, ಸಹಾಯಕ ನರಸಿಂಹ ಅವರ ಸಹಕಾರದಿಂದ ಕಳೆದ ವಾರ ಶಿರಸಿ ಆಸ್ಪತ್ರೆಯಲ್ಲಿ ಆಪರೇಷನ್ ಅನ್ನು ಯಶಸ್ವಿಯಾಗಿ ಮಾಡಿದ್ದಾರೆ. ಶಿರಸಿ ಆಸ್ಪತ್ರೆಯಲ್ಲಿ ಐಸಿಯು ಇರದೇ ಇದ್ದರೂ ಇತರೆ ಸವಾಲಿನ ನಡುವೆ ಮಹಿಳೆ ಸಾಕಷ್ಟು ಸುಧಾರಣೆಯಾಗಿದ್ದಾಳೆಂದು ವೈದ್ಯ ಗಜಾನನ ಭಟ್ಟ ತಿಳಿಸಿದರು.
ಇನ್ನು, ಇದೇ ಆಪರೇಷನ್ ಖಾಸಗಿ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂ.ಗಿಂತ ಹೆಚ್ಚು ಬಿಲ್ ಆಗುತ್ತಿತ್ತು. ನಾವು ಉಚಿತವಾಗಿ ಮಾಡಿದ್ದು, 5000 ರೂಪಾಯಿಯನ್ನು ವೈದ್ಯರೇ ಭರಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗೆ ಎಲ್ಲ ಉತ್ತಮ ಸೌಲಭ್ಯ ಸಿಕ್ಕರೆ ಇನ್ನಷ್ಟು ಸವಾಲಿನ ಆಪರೇಷನ್ ಮಾಡಲು ಸಿದ್ಧರಿದ್ದೇವೆ. ರೋಗಿಗಳು ಸಹ ನಂಬಿಕೆಯಿಂದ ಬರಬೇಕು ಎಂದು ವಐದ್ಯರು ತಿಳಿಸಿದ್ದಾರೆ.