ಕಾರವಾರ:ಮಹಾಮಾರಿ ಕೊರೊನಾ ವೈರಸ್ನ ವ್ಯತಿರಿಕ್ತ ಪರಿಣಾಮವನ್ನು ಉತ್ತರ ಕನ್ನಡದಲ್ಲಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ.
ಜಿಲ್ಲೆಯ ಭಟ್ಕಳದಲ್ಲಿ ಪರಿಸ್ಥಿತಿ ಮಿತಿ ಮೀರಿದೆ. ಉನ್ನತ ಅಧಿಕಾರಿಗಳು ಇದನ್ನು ನಿಭಾಯಿಸುವಲ್ಲಿ ತಲ್ಲೀನರಾಗಿದ್ದಾರೆ. ಆದರೆ, ಇದರಿಂದಾಗಿ ಕಾರವಾರ ಸೇರಿದಂತೆ ಇನ್ನಿತರ ಕಡೆಯ ಜನರು ಪರದಾಡುವಂತಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ನಾಗರಿಕರಿಗೆ ಜೀವನೋಪಾಯಕ್ಕಾಗಿ ದೈನಂದಿನ ಸಾಮಗ್ರಿಗಳನ್ನು ಪೂರೈಸುವ ಕೆಲಸ ಆಮೆಗತಿಯಲ್ಲಿ ಸಾಗುತ್ತಿವೆ. ಕಾರವಾರದಲ್ಲಿಯೇ ಜೀವನೋಪಾಯಕ್ಕೆ ಬೇಕಾದ ಅವಶ್ಯಕ ವಸ್ತುಗಳು ಸರಿಯಾಗಿ ತಲುಪುತ್ತಿಲ್ಲ ಎಂದರು.
ಕೆಲವೇ ವಾಹನಗಳಿಂದ ಆಹಾರ ಸರಬರಾಜು ಮಾಡಲು ಸಾಧ್ಯವಿಲ್ಲ. ಪ್ರತಿ ವಾರ್ಡ್ಗೆ ಒಂದರಂತೆ ವಾಹನ ಬಳಸುವ ಅವಶ್ಯಕತೆ ಇದೆ. ಗ್ರಾಮಾಂತರ ಮಟ್ಟದಲ್ಲಿಯೂ ಪ್ರತಿ ಪಂಚಾಯತ್ ಮಟ್ಟದಲ್ಲಿ ಈ ರೀತಿಯ ಕ್ರಮ ಜರುಗಿಸಬೇಕಾಗಿದೆ. ಗೋವಾ ಗಡಿಯಲ್ಲಿ ಕರ್ನಾಟಕದವರು ಅನ್ನ ನೀರಿಲ್ಲದೇ ಉಪವಾಸ ಬಿದ್ದಿದ್ದಾರೆ. ಅವರನ್ನು ಸಂರಕ್ಷಿಸಬೇಕಿದೆ ಎಂದು ಒತ್ತಾಯಿಸಿದರು.
ಈ ಎಲ್ಲಾ ಜವಾಬ್ದಾರಿ ವಹಿಸಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಕಾಣೆಯಾಗಿದ್ದಾರೆ. ಸಮರೋಪಾದಿಯಲ್ಲಿ ಜರುಗಬೇಕಾಗಿದ್ದ ಕೆಲಸ ದಿಕ್ಕು ದೆಸೆ ಇಲ್ಲದೇ ಸಾಗುತ್ತಿದೆ. ವಿರೋಧ ಪಕ್ಷದ ಸಲಹೆಗಳನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.