ಕಾರವಾರ:ಕರ್ತವ್ಯ ನಿರತ ಬಸ್ ಚಾಲಕನ ಮೇಲೆ ಇಬ್ಬರು ಬೈಕ್ ಸವಾರರು ಓವರ್ ಟೇಕ್ ಮಾಡಿದ ಕಾರಣಕ್ಕೆ ಹಲ್ಲೆ ನಡೆಸಿದ ಘಟನೆ ಅಂಕೋಲಾ ಅವರ್ಸಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಬೈಕ್ ಹಿಂದಿಕ್ಕಿದ ನೆಪವೊಡ್ಡಿ ಬಸ್ ಚಾಲಕನ ಮೇಲೆ ಹಲ್ಲೆಯ ಆರೋಪ - ಕಾರವಾರ ಬಸ್ ಚಾಲಕನ ಮೇಲೆ ಹಲ್ಲೆ ಸುದ್ದಿ
ಕಾರವಾರದ ಅಂಕೋಲಾ ಅವರ್ಸಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ ಹಿಂದಿಕ್ಕಿದ ನೆಪವೊಡ್ಡಿ ಬಸ್ ಚಾಲಕನ ಮೇಲೆ ಹಲ್ಲೆಯ ಆರೋಪ ಕೇಳಿಬಂದಿದೆ. ಇಬ್ಬರು ಬೈಕ್ ಸವಾರರು ರಸ್ತೆ ಮಧ್ಯೆ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ದೂರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ
ಬಸ್ ಚಾಲಕ ಅಶೋಕ ಜುಮ್ಮಣ್ಣ ಅವರ ಮೇಲೆ ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ ಬೈಕ್ ಸವಾರರಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ತಾಲೂಕಿನ ಅವರ್ಸಾ ಗ್ರಾಮದ ರವಿದಾಸ್ ಹಲ್ಲೆ ಮಾಡಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಓವರ್‌ಟೇಕ್ ಮಾಡಿದ ಎಂಬ ಕಾರಣಕ್ಕೆ ಬಸ್‌ಗೆ ಬೈಕ್ ಅಡ್ಡ ನಿಲ್ಲಿಸಿ ಹೆದ್ದಾರಿಯಲ್ಲೇ ಹೆಲ್ಮೆಟ್‌ನಿಂದ ಹಲ್ಲೆ ನಡೆಸಲಾಗಿದ್ದು, ಅಶೋಕ ಅವರ ತಲೆಗೆ ಪೆಟ್ಟು ಬಿದ್ದಿದೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್‌ಐ ಸಂಪತ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ನಡೆಸುತ್ತಿದ್ದಾರೆ.