ಕರ್ನಾಟಕ

karnataka

ETV Bharat / state

ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತ ನಿವೃತ್ತ ನ್ಯಾಯಯಮೂರ್ತಿಗಳ ಸಮಿತಿಗೆ ಹಸ್ತಾಂತರ - ಮಹಾಬಲೇಶ್ವರ ದೇವಾಲಯದ ಆಡಳಿತ ಸಮಿತಿಗೆ ಹಸ್ತಾಂತರ

ಸುಪ್ರೀಂಕೋರ್ಟ್ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠದಿಂದ ನಿವೃತ್ತ ನ್ಯಾಯಮೂರ್ತಿಯನ್ನೊಳಗೊಂಡ ಸಮಿತಿಗೆ ಹಸ್ತಾಂತರಿಸಲಾಗಿದೆ.

mahabaleshwar temple administration handed over
ಮಹಾಬಲೇಶ್ವರ ದೇವಾಲಯದ ಆಡಳಿತ ಸಮಿತಿಗೆ ಹಸ್ತಾಂತರ

By

Published : May 9, 2021, 12:24 PM IST

ಕಾರವಾರ:ಸುಪ್ರೀಂಕೋರ್ಟ್ ಆದೇಶದಂತೆ ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಆಡಳಿತವನ್ನ ರಾಮಚಂದ್ರಾಪುರ ಮಠದಿಂದ ಸಮಿತಿಗೆ ಹಸ್ತಾಂತರಿಸುವ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಒಟ್ಟು ರೂ 2.76 ಕೋಟಿ ಬ್ಯಾಂಕ್​ನಲ್ಲಿ ಠೇವಣಿ ಇಡಲಾಗಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ರಾಮಚಂದ್ರಾಪುರ ಮಠದಿಂದ ನಿವೃತ್ತ ನ್ಯಾಯಮೂರ್ತಿಯನ್ನೊಳಗೊಂಡ ಸಮಿತಿಗೆ ಹಸ್ತಾಂತರಿಸುವಂತೆ ಕೋರ್ಟ್ ಸೂಚಿಸಿತ್ತು. ಅದರಂತೆ ಕಳೆದ ಕೆಲ ದಿನಗಳಿಂದ ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್ ಅವರ ಸಮ್ಮುಖದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಿ.ಕೆ. ಹೆಗಡೆ ದೇವಸ್ಥಾನದ ಆಭರಣ, ಸ್ಥಿರಾಸ್ತಿ, ಚರಾಸ್ತಿ, ಹಣಕಾಸು, ಬ್ಯಾಂಕ್ ಖಾತೆಗಳನ್ನು ಹಸ್ತಾಂತರಿಸಿದ್ದು, ಇದನ್ನು ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ.

ಸದ್ಯ ದಿನನಿತ್ಯದ ವ್ಯವಹಾರಗಳು ಮೊದಲಿನಂತೆ ನಡೆಯಲಿವೆ. ದೇವಸ್ಥಾನದ ಉಸ್ತುವಾರಿಯನ್ನು ಇಲ್ಲಿಯ ಕಂದಾಯ ಅಧಿಕಾರಿ ನೋಡಿಕೊಳ್ಳಲಿದ್ದಾರೆ. ಕೋವಿಡ್ ಕಾರಣದಿಂದ ಭಕ್ತರಿಗೆ ಪೂಜೆಗೆ ಅವಕಾಶ ಇಲ್ಲ. ಹಾಗಾಗಿ ಮುಂದಿನ ನಿರ್ಧಾರವನ್ನು ನಂತರ ಸಮಿತಿ ತೆಗೆದುಕೊಳ್ಳಲಿದೆ ಎಂದು ಉಪ ವಿಭಾಗಾಧಿಕಾರಿ ಅಜಿತ್ ಹೇಳಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದೇವಸ್ಥಾನಕ್ಕೆ ಭೇಟಿ ನೀಡಿ, ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಿದರು. ಸಮಿತಿಯ ಇತರ ಸದಸ್ಯರೊಂದಿಗೆ ಸ್ವಲ್ಪಹೊತ್ತು ಚರ್ಚೆ ನಡೆಸಿದರು. ಈ ವೇಳೆ ಸಮಿತಿಯ ಸದಸ್ಯರಾದ ಮಹಾಬಲ ಉಪಾಧ್ಯ, ದತ್ತಾತ್ರೇಯ ಹಿರೇಗಂಗೆ, ಪರಮೇಶ್ವರ ಮಾರ್ಕಾಂಡೆ, ಕಂದಾಯ ಅಧಿಕಾರಿ ಕೆ.ಎಸ್.ಗೊಂಡ, ಪಿ.ಎಸ್.ಐ ನವೀನ್ ನಾಯ್ಕ ಇದ್ದರು.

ದೇವಸ್ಥಾನದ ಹಿಂದಿನ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಪ್ರತಿಕ್ರಿಯಿಸಿ, ದೇವಸ್ಥಾನ 13 ವರ್ಷಗಳಲ್ಲಿ ತುಂಬಾ ಅಭಿವೃದ್ಧಿಯಾಗಿದೆ. ಹಿಂದಿನ ಟ್ರಸ್ಟ್‌ ಬ್ಯಾಂಕಿನಲ್ಲಿ ಇಟ್ಟಿದ್ದ ಠೇವಣಿ ಹಣ ಬಡ್ಡಿ ಸಮೇತ ಜಮೆ ಆಗಿದೆ. ಕೆ.ಡಿ.ಸಿ.ಸಿ ಬ್ಯಾಂಕಿನಲ್ಲಿ ಹಾಗೆಯೇ ಇದೆ ಎಂದರು.

ಕರ್ನಾಟಕ ಬ್ಯಾಂಕಿನಲ್ಲಿ 1.57 ಕೋಟಿ ರೂ. ಬಡ್ಡಿ ಸೇರಿ ಹಾಗೇ ಇದೆ. ಅದನ್ನು ಬಿಟ್ಟು ರೂ.1.19 ಕೋಟಿ ಠೇವಣಿ ಇಟ್ಟಿದ್ದೇವೆ. ಒಟ್ಟು ರೂ.2.76 ಕೋಟಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. ಚಾಲ್ತಿ ಖಾತೆಯಲ್ಲಿ ರೂ.54.24 ಲಕ್ಷ ಇಡಲಾಗಿದೆ. ಇಲ್ಲಿಯವರೆಗೆ ರೂ.60 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ಜನರಿಗೆ ಅಮೃತಾನ್ನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಓದಿ:ರಾಮಚಂದ್ರಾಪುರ ಮಠ ಕೈತಪ್ಪಿದ ಗೋಕರ್ಣ ಮಹಾಬಲೇಶ್ವರ ದೇವಾಲಯ: ಹೀಗಿದೆ ಕಾನೂನು ಸಮರದ ಹಿನ್ನೋಟ

ABOUT THE AUTHOR

...view details