ಕಾರವಾರ/ಉತ್ತರಕನ್ನಡ :ಕಾರವಾರತಾಲೂಕಿನ ಐತಿಹಾಸಿಕ ಛತ್ರಪತಿ ಶಿವಾಜಿ ಕಾಲದ ದುರ್ಗಾದೇವಿ ದೇವಾಲಯಕ್ಕೆ ಆಗಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.
ದುರ್ಗಾದೇವಿ ದರ್ಶನ ಪಡೆದ ಗೋವಾ ಸಿಎಂ ನವರಾತ್ರಿ ಹಿನ್ನೆಲೆಯಲ್ಲಿ ತಾಲೂಕಿನ ಸದಾಶಿವಗಡದಲ್ಲಿರುವ ದುರ್ಗಾದೇವಿ ದೇವಾಲಯಕ್ಕೆ ಆಗಮಿಸಿದ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಅವರೊಂದಿಗೆ ಶಾಸಕಿ ರೂಪಾಲಿ ನಾಯ್ಕ ಕೂಡ ಭಾಗಿಯಾಗಿ ಪೂಜೆ ಸಲ್ಲಿಸಿದರು.
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರ್ಗಾದೇವಿ ದೇವಾಲಯಕ್ಕೆ ಬರುವ ಇಚ್ಛೆ ಇತ್ತು. ಅಲ್ಲದೆ ನವರಾತ್ರಿ ಹಿನ್ನೆಲೆ ಶಾಸಕಿ ರೂಪಾಲಿ ನಾಯ್ಕ ಹಾಗೂ ಹಲವು ಭಕ್ತರು ಆಗಮಿಸುವಂತೆ ಆಹ್ವಾನ ನೀಡಿದ್ದರು. ಅದರಂತೆ ಇಂದು ಬಂದು ಪೂಜೆ ಸಲ್ಲಿಸಿದ್ದೇನೆ ಎಂದರು.
ಗೋವಾ ರಾಜ್ಯದ ಪ್ರವಾಸೋದ್ಯಮ ನವೆಂಬರ್ನಿಂದ ಮುಕ್ತವಾಗಲಿದೆ. ಈಗಾಗಲೇ ಮೊದಲ ಡೋಸ್ ಲಸಿಕಾಕರಣ ವೇಗವಾಗಿ ಮುಗಿಸಿದ್ದೇವೆ. ಎರಡನೇ ಡೋಸ್ ಮುಂದಿನ ಒಂದು ತಿಂಗಳಲ್ಲಿ ಮುಗಿಸುತ್ತೇವೆ. ಸದ್ಯದಲ್ಲಿಯೇ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸುವುದಾಗಿ ಹೇಳಿದರು.