ಕಾರವಾರ:ಅದು ನೌಕಾನೆಲೆ ವ್ಯಾಪ್ತಿಯ ಸಮುದ್ರ ಮಧ್ಯದ ದ್ವೀಪ. ಒಂದು ಕಾಲದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರು ಇಲ್ಲಿನ ದೇವಸ್ಥಾನ ಹಾಗೂ ಚರ್ಚ್ಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ನೌಕಾನೆಲೆ ಸ್ಥಾಪನೆಯಾದ ಬಳಿಕ ಭದ್ರತಾ ದೃಷ್ಟಿಯಿಂದ ಅಲ್ಲಿ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ಹೇರಲಾಗಿದೆ. ಇದೀಗ ಗೋವಾದ ಕ್ರಿಶ್ಚಿಯನ್ನರು ಅಂಜುದೀವ್ ದ್ವೀಪದ ಪ್ರವೇಶಕ್ಕೆ ಅವಕಾಶ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿರುವುದು ಹಿಂದೂ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿದೆ.
ಕಾರವಾರದ ಬಿಣಗಾ ಬಳಿ ಅರಬ್ಬಿ ಸಮುದ್ರದಲ್ಲಿರುವ ಅಂಜುದೀವ್ ದ್ವೀಪ ಕದಂಬ ನೌಕಾನೆಲೆ ಪ್ರಾರಂಭವಾದ ಬಳಿಕ ನಿಷೇಧಕ್ಕೊಳಗಾಗಿದೆ. ವಿಚಿತ್ರ ಅಂದ್ರೆ ಈ ದ್ವೀಪ ಕಾರವಾರಕ್ಕೆ ಸಮೀಪವಿದ್ರು ಗೋವಾ ವ್ಯಾಪ್ತಿಗೆ ಬರುತ್ತದೆ. ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣವೂ ಆಗಿತ್ತು.
ಪೊರ್ಚುಗೀಸರು ಈ ಪ್ರದೇಶದಲ್ಲಿ ನಿರ್ಮಿಸಿದ ಚರ್ಚ್ನಲ್ಲಿ ಪ್ರತಿ ವರ್ಷ ಧಾರ್ಮಿಕ ಆಚರಣೆ ನಡೆಸುತ್ತಿದ್ದರೆ, ಹಿಂದೂಗಳು ಅಂಜದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. 1991ರಲ್ಲಿ ಕದಂಬ ನೌಕಾನೆಲೆ ಯೋಜನೆ ವ್ಯಾಪ್ತಿಗೆ ದ್ವೀಪವನ್ನು ಹಸ್ತಾಂತರಿಸಲಾಯ್ತು. ಭದ್ರತೆ ದೃಷ್ಟಿಯಿಂದ 2000ರ ನಂತರ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿತ್ತು. ಅದರಂತೆ ಚರ್ಚ್ ಹಾಗೂ ದೇವಸ್ಥಾನಗಳಿಗೂ ಪ್ರವೇಶ ನಿಷೇಧಿಸಲಾಗಿತ್ತು.