ಕಾರವಾರ: ರಾಮನಗರ ಅನಮೋಡ ನಡುವಿನ ಗೋವಾ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಐದು ವರ್ಷಗಳಿಂದ ಕುಂಟುತ್ತ ಸಾಗಿದೆ. 20 ಕಿಲೊ ಮೀಟರ್ ಹೆದ್ದಾರಿ ಅಭಿವೃದ್ಧಿಗೆ ಐದು ವರ್ಷ ಪಡೆದರೂ ಇದೀಗ ನಾಲ್ಕೈದು ಕಿಲೊ ಮೀಟರ್ ಹೆದ್ದಾರಿ ಕಾಮಗಾರಿ ಮುಗಿಸಲು ಮೀನಮೇಷ ಏಣಿಸುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವ ಭಾರಿ ವಾಹನ ಸವಾರರು ಸುತ್ತಿ ಬಳಿಸಿ ತೆರಳಿ ಭಾರಿ ನಷ್ಟ ಅನುಭವಿಸುವಂತಾಗಿದೆ. ಈ ಕುರಿತು ಸ್ಪೇಷಲ್ ರಿಪೋರ್ಟ್ ಈಟಿವಿ ಭಾರತ ತೆರೆದಿಟ್ಟಿದೆ.
ಹೌದು.. ಗೋವಾ ಬೆಳಗಾವಿ ಹೆದ್ದಾರಿ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕ ಕೊಂಡಿಯಾಗಿರುವ ಪ್ರಮುಖ ಮಾರ್ಗವಾಗಿದೆ. ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಆದರೆ, ಕಳೆದ ಐದು ವರ್ಷದಿಂದ ಈ ಹೆದ್ದಾರಿ ವಿಸ್ತರಣೆ ಮತ್ತು ಕಾಂಕ್ರೀಟಿಕರಣ ಕಾಮಗಾರಿ ಮಾಡಲಾಗುತ್ತಿದೆ, ಇನ್ನೂ ಕೂಡ ಅರೆಬರೆಯಾಗಿದೆ. ಕಳೆದ ಮಳೆಗಾಲದಲ್ಲಿ ಈ ಹೆದ್ದಾರಿ ಸಂಪೂರ್ಣ ಬಂದ್ ಮಾಡಿರುವ ಕಾರಣ ಗೋವಾದಿಂದ ಬೆಳಗಾವಿ, ಹುಬ್ಬಳ್ಳಿ ಸಂಪರ್ಕಿಸಬೇಕಿರುವ ವಾಹನ ಸವಾರರಿಗೆ ಅನ್ಯ ಮಾರ್ಗ ಬಳಸುವಂತೆ ಉತ್ತರಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿತು. ಆದರೆ ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಳಿಸಿದ್ದು ನಾಲ್ಕೈದು ಕಿ.ಮೀ ಕಾಮಗಾರಿ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.
ಆದರೆ, ಇದೇ ಮಾರ್ಗದಲ್ಲಿ ಬಸ್, ಲಾರಿ, ಕಾರು ಬೈಕ್ ಎಲ್ಲವೂ ಓಡಾಟ ನಡೆಸುತ್ತಿವೆ. ಆದರೆ ಭಾರಿ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ಕಾರವಾರ ಯಲ್ಲಾಪುರ ಮೂಲಕ ನೂರಾರು ಕಿ.ಮೀ ಹೆಚ್ಚುವರಿ ಸುತ್ತಿಕೊಂಡು ತೆರಳಬೇಕು. ಇದರಿಂದ ಸುಮಾರು 7 ಸಾವಿರ ನಷ್ಟವಾಗುತ್ತಿರುವುದಲ್ಲದೇ ಒಂದು ದಿನಕ್ಕೆ ತಲುಪುವ ದಾರಿಯನ್ನು ಬಿಟ್ಟು ಎರಡ್ಮೂರು ದಿನ ಸುತ್ತಿ ಬಳಸಿ ತೆರಳಬೇಕಾಗಿದೆ. ಕೂಡಲೇ ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಇಲ್ಲದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಭಾರಿ ವಾಹನ ಚಾಲಕರ ಅಸೋಸಿಯೇಷನ್ ಅಧ್ಯಕ್ಷ ಜಹೀರ್ ತಡಕೋಡ್ ಎಚ್ಚರಿಕೆ ನೀಡಿದ್ದಾರೆ.