ಕರ್ನಾಟಕ

karnataka

ETV Bharat / state

ಕೈಕೊಟ್ಟ ಬಾರ್ಜ್, ಕುಂಟುತ್ತಿರುವ ಸೇತುವೆ ಕಾಮಗಾರಿ: ಗಂಗಾವಳಿ ನದಿ ತೀರದ ಮಂದಿಗೆ ಸಂಚಾರ ಸಂಕಷ್ಟ - Karwar Gangavali River News

ಮಳೆಗಾಲದಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುವ ಸಂದರ್ಭದಲ್ಲಿ ಬಾರ್ಜ್ ಓಡಾಟ ಸಾಧ್ಯವಾಗದ ಕಾರಣ ಜನರ ಓಡಾಟಕ್ಕೆ ತೊಂದರೆಯಾಗದಂತೆ ಶಾಶ್ವತ ಸೇತುವೆ ಮಾಡಬೇಕೆಂದು ಇಲ್ಲಿನ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಆದರೆ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭವಾಗಿ 2 ವರ್ಷಗಳಾಗುತ್ತಾ ಬಂದರೂ ಸಹ ಇದುವರೆಗೂ ಸಹ ಪೂರ್ಣಗೊಂಡಿಲ್ಲ.

gangavali
ಗಂಗಾವಳಿ ನದಿ ತೀರದ ಜನರಿಗೆ ತಪ್ಪದ ಸಂಕಷ್ಟ

By

Published : Aug 19, 2021, 1:16 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ ಭಾಗದಲ್ಲಿ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾರ್ಯ ಪ್ರಾರಂಭವಾಗಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಸಹ ಸೇತುವೆ ಮಾತ್ರ ಪೂರ್ಣಗೊಂಡಿಲ್ಲ.

ಗಂಗಾವಳಿ ನದಿಗೆ ಹೊಂದಿಕೊಂಡು ನದಿಯ ಮತ್ತೊಂದೆಡೆ ಕಡೆ ನಾಡುಮಾಸ್ಕೇರಿ, ಅಗ್ರಗೋಣ ಸೇರಿದಂತೆ ಹತ್ತಾರು ಗ್ರಾಮಗಳಿವೆ. ಆ ಭಾಗದ ಜನರು ಅಂಕೋಲಾ ಪಟ್ಟಣಕ್ಕೆ ತೆರಳಲು ಗಂಗಾವಳಿ ನದಿ ದಾಟಬೇಕು. ಈ ಮಾರ್ಗ ಸಮೀಪವಾಗಲಿದ್ದು, ಹೀಗಾಗಿ ಹಿಂದಿನಿಂದ ಈ ಮಾರ್ಗದಲ್ಲಿ ಜನರು ಬಾರ್ಜ್​ ಬಳಕೆ ಮಾಡಿ ಓಡಾಡುತ್ತಿದ್ದರು.

ಆದರೆ ಮಳೆಗಾಲದಲ್ಲಿ ನದಿ ಉಕ್ಕಿ ಹರಿಯುವ ಸಂದರ್ಭದಲ್ಲಿ ಬಾರ್ಜ್ ಓಡಾಟ ಸಾಧ್ಯವಾಗದ ಕಾರಣ ಓಡಾಟಕ್ಕೆ ತೊಂದರೆಯಾಗದಂತೆ ಶಾಶ್ವತ ಸೇತುವೆ ಮಾಡಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದರು. ಅದರಂತೆ ಎರಡು ವರ್ಷಗಳ ಹಿಂದೆ ಸೇತುವೆಗೆ ಅನುದಾನ ಮಂಜೂರಾಗಿ ಕಾಮಗಾರಿ‌ ಸಹ ಪ್ರಾರಂಭವಾಗಿತ್ತು. ಆದರೆ ಕಳೆದೆರಡು ವರ್ಷಗಳಿಂದ ವಕ್ಕರಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.

ಗಂಗಾವಳಿ ನದಿ ತೀರದ ಜನರಿಗೆ ತಪ್ಪದ ಸಂಕಷ್ಟ

ಇದುವರೆಗೆ ಶೇ.70 ರಷ್ಟು ಭಾಗ ಮಾತ್ರ ಸೇತುವೆ ನಿರ್ಮಾಣವಾಗಿದ್ದು ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಾರ್ಜ್ ಓಡಾಟ ಸ್ಥಗಿತಗೊಂಡಿದೆ. ಆದರೆ ಇದರಿಂದ ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದವರು ಪರದಾಡುವಂತಾಗಿದ್ದು, ಬೇರೆ ದಾರಿ ಇಲ್ಲದೇ ಜೀವ ಕೈಯಲ್ಲಿ ಹಿಡಿದು ದೋಣಿಗಳಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಗಂಗಾವಳಿ ದಾಟಿಕೊಂಡು ಮಂಜಗುಣಿ ಭಾಗಕ್ಕೆ ಸಾಕಷ್ಟು ಮಂದಿ ಉದ್ಯೋಗಕ್ಕಾಗಿ ಪ್ರತಿನಿತ್ಯ ಆಗಮಿಸುತ್ತಾರೆ. ನದಿ ದಾಟಿದರೆ ಅಂಕೋಲಾ ಪಟ್ಟಣಕ್ಕೆ ಕೇವಲ ಐದಾರು ಕಿಲೋಮೀಟರ್ ಆಗುತ್ತದೆ. ಅದೇ ಹೆದ್ದಾರಿಯಲ್ಲಿ ಆಗಮಿಸುವುದಾದಲ್ಲಿ 20 ರಿಂದ 25 ಕಿಲೋ‌ಮೀಟರ್ ಸುತ್ತುವರಿದು ಬರಬೇಕಿದೆ. ಹೀಗಾಗಿ ಗಂಗಾವಳಿ ಮಾರ್ಗವನ್ನ ಸಾಕಷ್ಟು ಮಂದಿ ಅವಲಂಬಿಸಿಕೊಂಡಿದ್ದು ಈ ಭಾಗದಲ್ಲಿ ಬ್ರಿಡ್ಜ್ ನಿರ್ಮಾಣವಾದರೆ ಅನುಕೂಲವಾಗುತ್ತದೆ. ಕಳೆದೆರಡು ವರ್ಷಗಳಿಂದ ಬ್ರಿಡ್ಜ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಈ ವರ್ಷವೂ ಪೂರ್ಣಗೊಳ್ಳುವ ಸಾಧ್ಯತೆಗಳು ಕಾಣುತ್ತಿಲ್ಲ. ಇದರಿಂದಾಗಿ ಗ್ರಾಮಸ್ಥರಿಗೆ ಮತ್ತೆ ದೋಣಿ ಓಡಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾವಾಗಿದೆ.

ಸೇತುವೆ ಕಾಮಗಾರಿಗಾಗಿ ನದಿಗೆ ಮಣ್ಣನ್ನ ತುಂಬಿಸಿ ಹರಿವನ್ನ‌ ಹಿಡಿದಿಟ್ಟಿದ್ದರಿಂದಾಗಿ ಈ ಬಾರಿ ಗಂಗಾವಳಿ ಪಾತ್ರದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನುವ ಆರೋಪಗಳು ಸಹ ಕೇಳಿಬಂದಿದೆ. ಹೀಗಾಗಿ ಆದಷ್ಟು ಶೀಘ್ರದಲ್ಲಿ ಸೇತುವೆಯನ್ನ ಪೂರ್ಣಗೊಳಿಸಿ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.

ABOUT THE AUTHOR

...view details