ಕಾರವಾರ: ಹಸಿದವರಿಗೆ ಇಲ್ಲೊಂದು ತಂಡ ನಿತ್ಯ ನೂರಾರು ಮಂದಿಗೆ ಉಚಿತ ಊಟ ನೀಡುತ್ತಿದೆ. ಕೊರೊನಾ ಸಂಕಷ್ಟದ ಲಾಕ್ಡೌನ್ ಅವಧಿಯಲ್ಲಿಯೂ ಚಾಚೂ ತಪ್ಪದೇ ನಿಗದಿತ ಸಮಯಕ್ಕೆ ಊಟವನ್ನು ಪಾರ್ಸಲ್ ಕವರ್ನಲ್ಲಿ ನೀಡುತ್ತಿದ್ದು ಮಾನವೀಯ ಸೇವೆ ಮುಂದುವರೆಸಿದೆ.
ಕಾರವಾರದ ನಿವಾಸಿಯಾಗಿರುವ ಸ್ಯಾಮ್ಸನ್ ಡಿಸೋಜಾ ಹಸಿದವರಿಗೆ ಊಟ ಎನ್ನುವ ಧ್ಯೇಯದೊಂದಿಗೆ ಫ್ರೀ ಊಟ ನೀಡುವ ಸೇವೆ ಮಾಡುತ್ತಿದ್ದಾರೆ.
ಇಲ್ಲಿನ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು, ಅವರ ಸಂಬಂಧಿಕರು ಹಾಗೂ ನಗರದ ವಿವಿಧೆಡೆ ಇರುವ ನಿರ್ಗತಿಕರು ಸೇರಿ ನಿತ್ಯ 300 ಮಂದಿಗೆ ಊಟ ಪೂರೈಸುತ್ತಿದ್ದಾರೆ. ಯಾವೊಬ್ಬ ಹಸಿದವರೂ ಕೂಡ ಉಪವಾಸ ಇರಬಾರದು ಎನ್ನುವ ಉದ್ದೇಶ ಹೊಂದಿರುವ ಸ್ಯಾಮ್ಸನ್, ಲಾಕ್ಡೌನ್ ಅವಧಿಯಲ್ಲಿಯೂ ತಮ್ಮ ಸೇವೆ ಮುಂದುವರೆಸಿಕೊಂಡು ಬಂದಿದ್ದಾರೆ. ವಿಶ್ವಕ್ಕೇ ಮಾದರಿಯಾಗಿರುವ ಮದರ್ ಥೆರೇಸಾ ಅವರೇ ಈ ಕಾರ್ಯಕ್ಕೆ ಪ್ರೇರಣೆ ಅಂತಾರೆ ಸ್ಯಾಮ್ಸನ್.
ಪ್ರತಿನಿತ್ಯ 12:30 ರಿಂದ 1:30ರವರೆಗೆ ಇಲ್ಲಿನ ಜಿಲ್ಲಾಸ್ಪತ್ರೆ ಬಳಿ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಊಟ ವಿತರಿಸಲಾಗುತ್ತದೆ. ಆಸ್ಪತ್ರೆಗೆ ಬರುವ ನೂರಾರು ಮಂದಿ ಬಡವರು, ನಿರ್ಗತಿಕರಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತಿದ್ದು 200ಕ್ಕೂ ಅಧಿಕ ಮಂದಿ ಮದರ್ ಥೆರೇಸಾ ಸಂಸ್ಥೆ ನೀಡುವ ಊಟ ಮಾಡುತ್ತಿದ್ದಾರೆ. ಅಲ್ಲದೇ ನಗರದಲ್ಲಿ ವಿವಿಧೆಡೆ ಭಿಕ್ಷುಕರು ಹಾಗೂ ನಿರ್ಗತಿಕರು ಇರುವಲ್ಲಿಗೆ ವಾಹನದ ಮೂಲಕ ತೆರಳುವ ಸ್ಯಾಮ್ಸನ್, ಅವರಿಗೆ ಅಗತ್ಯವಿರುವಷ್ಟು ಆಹಾರ ನೀಡುತ್ತಾರೆ. ಕೊರೊನಾ ಬಳಿಕ ಆಸ್ಪತ್ರೆಯಲ್ಲಿ ಹೊರರೋಗಿಗಳ ಸಂಖ್ಯೆ ಇಳಿಕೆಯಾಗಿರುವುದರಿಂದಾಗಿ ಊಟ ಮಾಡುವವರ ಸಂಖ್ಯೆ ಕೊಂಚ ಕಡಿಮೆಯಾಗಿದ್ದು ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಸದ್ಯ 150-200 ಮಂದಿಗೆ ಊಟವನ್ನು ಪಾರ್ಸಲ್ ಕವರ್ ನಲ್ಲಿ ಪ್ಯಾಕ್ ಮಾಡಿ ವಿತರಿಸುತ್ತಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಿಸಿ : ಹೈಕೋರ್ಟ್ ಸೂಚನೆ
ಹಲವು ದಾನಿಗಳು ಹಾಗೂ ಸ್ನೇಹಿತರು ಈ ಕೆಲಸಕ್ಕೆ ಸಹಕರಿಸುತ್ತಿದ್ದು, ಈ ಮೂಲಕ ಸೇವೆ ಮುಂದುವರೆಸಿಕೊಂಡು ಹೋಗಲು ಸಹಾಯವಾಗುತ್ತಿದೆ ಎಂದು ಸ್ಯಾಮ್ಸನ್ ಹೇಳುತ್ತಾರೆ. ಊಟಕ್ಕೆ ಅನ್ನ, ಸಾಂಬಾರ್ ಹಾಗೂ ಉಪ್ಪಿನಕಾಯಿ ಒದಗಿಸಲಾಗುತ್ತಿದೆ.