ಕಾರವಾರ:ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೊಳಿಸಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಅವಕಾಶ ಮಾಡಿಕೊಡಲಾಗಿದೆ. ಸದ್ಯ ಶಕ್ತಿ ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಇದರ ಬಿಸಿ ಟೆಂಪೋ ಚಾಲಕರು ಹಾಗೂ ನಿರ್ವಾಹಕರಿಗೆ ಜೋರಾಗಿಯೇ ತಟ್ಟಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಹಿನ್ನೆಲೆ ಬಸ್‌ಗಳೆಲ್ಲವೂ ತುಂಬಿ ತುಳುಕುತ್ತಿವೆ. ಖಾಸಗಿ ವಾಹನಗಳಾದ ಟೆಂಪೋಗಳು ಇದೀಗ ಪ್ರಯಾಣಿಕರಿಲ್ಲದೇ ಖಾಲಿ ಖಾಲಿ ಹೊಡೆಯುವಂತಾಗಿದೆ.
ಇದನ್ನೂ ಓದಿ:ಸರ್ಕಾರಿ ಬಸ್ನಲ್ಲಿ ಸೀಟ್ಗಾಗಿ ನಾರಿಯರ ಕಿತ್ತಾಟ: ವೈರಲ್ ವಿಡಿಯೋ
ಹೌದು, ರಾಜ್ಯದ ಕಾಂಗ್ರೆಸ್ ಸರ್ಕಾರ ತಾನು ಕೊಟ್ಟ ಮಾತಿನಂತೆ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣದ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ಬೆನ್ನುತಟ್ಟಿಕೊಳ್ಳುತ್ತಿದೆ. ಆದರೆ, ಇದರಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಟೆಂಪೋ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಪ್ರತಿನಿತ್ಯ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಟೆಂಪೋಗಳು ಖಾಲಿ ಖಾಲಿ ಹೊಡೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಅಧಿಕ ಟೆಂಪೋಗಳಿದ್ದು, ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯ 1,500ಕ್ಕೂ ಅಧಿಕ ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಆದರೆ, ಸರ್ಕಾರದ ಉಚಿತ ಪ್ರಯಾಣದ ಯೋಜನೆಯಿಂದ ಮಹಿಳಾ ಪ್ರಯಾಣಿಕರನ್ನೇ ಹೆಚ್ಚು ಅವಲಂಬಿಸಿದ್ದ ಟೆಂಪೋಗಳಲ್ಲಿ ಇದೀಗ ಬೆರಳೆಣಿಕೆಯ ಪ್ರಯಾಣಿಕರಷ್ಟೇ ಸಂಚರಿಸುವಂತಾಗಿದೆ. ಇದರಿಂದಾಗಿ ಟೆಂಪೋಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಚಾಲಕರು, ನಿರ್ವಾಹಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.