ಕಾರವಾರ: ಗುಡ್ಡದ ಮಣ್ಣು (ಧರೆ) ಕುಸಿದು ಮದುವೆ ಮಾತುಕತೆಯಾದ ಯುವತಿ ಸೇರಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.
ಯಲ್ಲಾಪುರದಲ್ಲಿ ಧರೆ ಕುಸಿತ, ಯುವತಿಯ ಮದುವೆ ಕನಸು 'ಮಣ್ಣು'ಪಾಲು ಆಕೆಯ ಮದುವೆಗೆಂದು ಮನೆಯವರು ಬೆಳಗ್ಗೆಯಷ್ಟೇ ಕೊಲ್ಲಾಪುರಕ್ಕೆ ತೆರಳಿ, ಹುಡುಗನ ಮನೆಯಲ್ಲಿ ಮಾತುಕತೆ ನಡೆಸಿ ಬಂದಿದ್ದರು. ಏಪ್ರಿಲ್‌ನಲ್ಲಿ ಮದುವೆಗೆ ದಿನ ನಿಗದಿಪಡಿಸಿದ್ದಲ್ಲದೇ, ಆಕೆಯ ಮದುವೆಗಾಗಿ ಆಭರಣಗಳನ್ನೂ ಖರೀದಿಸಿಟ್ಟಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. ಕೂಲಿ ಕೆಲಸಕ್ಕೆಂದು ಇತರ 7 ಮಂದಿ ಕಾರ್ಮಿಕರೊಂದಿಗೆ ತೆರಳಿದಾಕೆ ಧರೆ ಕುಸಿದು ಮಸಣದ ಹಾದಿ ಹಿಡಿದಿದ್ದಾಳೆ.
ಹೌದು, ಕಳೆದ 15 ದಿನಗಳಿಂದ ಯಲ್ಲಾಪುರದ ಇಡಗುಂದಿಯ ಸಂತೇಬೈಲ್ನ ಮಂಜುನಾಥ ಭಟ್ಟ ಎಂಬುವವರ ತೋಟದ ಬಳಿ ಕೆಲಸ ಮಾಡುತ್ತಿದ್ದರು. ನಿನ್ನೆ ಕೂಡ ಎಲ್ಲರೂ ಕೆಲಸ ಮುಗಿಸಿ ನೀರು ಕುಡಿಯಲು ಕುಳಿತಿದ್ದರು. ಈ ವೇಳೆ ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಅದರಲ್ಲಿ ಒಂದೇ ಕುಟುಂಬದ ಮೂವರು ಹಾಗೂ ಇಂದೇ ಹುಡಗನ ಮನೆಯವರೊಂದಿಗೆ ಮದುವೆ ಮಾತುಕತೆ ನಡೆಸಿಕೊಂಡು ಬಂದಿದ್ದ ಯುವತಿಯೂ ಸೇರಿದ್ದಾಳೆ. ಭಾಗ್ಯಶ್ರೀ (21), ಲಕ್ಷ್ಮೀ (38), ಸಂತೋಷ್ (18) ಹಾಗೂ ಮಾಳು ಡೋಯಿಪಡೆ (21) ಮೃತ ಕಾರ್ಮಿಕರಾಗಿದ್ದಾರೆ.
ಸದ್ಯ ನಾಲ್ವರ ಮೃತದೇಹಗಳನ್ನು ಮಣ್ಣಿನಿಂದ ಹೊರತೆಗೆಯಲಾಗಿದ್ದು, ಯಲ್ಲಾಪುರದ ಸರ್ಕಾರಿ ಶವಗಾರಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆ ಮುಂದೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು ಘಟ್ಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್ ಕಾಂಬ್ಳೆ ಈ ಭಾಗದಲ್ಲಿ ಬಹುತೇಕ ಗೌಳಿ ಸಮುದಾಯದ ಜನರು ಕೂಲಿನಾಲಿ ಮಾಡಿ ಜೀವನ ಮಾಡುತ್ತಾರೆ. ಅದರಂತೆ ಇಂದು ಕೂಡ ಏಳು ಕೆಲಸಕ್ಕೆ ತೆರಳಿದಾಗ ದುರ್ಘಟನೆ ಸಂಭವಿಸಿದೆ. ಇದರಿಂದಾಗಿ ಅಮಾಯಕ ಕಾರ್ಮಿಕರು ಸಾವನ್ನಪ್ಪಿದ್ದು, ಸರ್ಕಾರ ಕೂಡಲೇ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಾರೆ ಹೊಟ್ಟೆಪಾಡಿಗಾಗಿ ಕೂಲಿಗೆ ತೆರಳಿದ ಮಕ್ಕಳು, ಮದುವೆ ನಿಶ್ಚಯವಾದ ಯುವತಿ ಸೇರಿ ನಾಲ್ವರು ಅಮಾಯಕರು ಬಲಿಯಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಬಡ ಕೂಲಿ ಕಾರ್ಮಿಕ ಕುಟುಂಬದವರಿಗೆ ಸೂಕ್ತ ಪರಿಹಾರ ಕಲ್ಪಿಸುವುದರ ಜೊತೆಗೆ ಮುಂದೆ ಇಂತಹ ಅನಾಹುತಗಳು ನಡೆಯದಂತೆ ಕ್ರಮವಹಿಸಬೇಕಾಗಿದೆ.