ಕಾರವಾರ : ಆಮ್ಲಜನಕ ಸಮಸ್ಯೆ ಎದುರಾಗುವ ಕೊರೊನಾ ಸೋಂಕಿತರಿರುವ ಆಯಾ ಸ್ಥಳಗಳಿಗೆ ತೆರಳಿ ಇಲ್ಲವೇ, ಆಸ್ಪತ್ರೆಗಳಲ್ಲಿ ದಾಖಲಾಗುವ ಮೊದಲು ಆಮ್ಲಜನಕ ಅವಶ್ಯವಿದ್ದವರಿಗೆ ಪೂರೈಸುವ ಉದ್ದೇಶದಿಂದ ಬೆಂಗಳೂರಿನಿಂದ ಉತ್ತರಕನ್ನಡ ಜಿಲ್ಲೆಗೆ ನಾಲ್ಕು ಆಕ್ಸಿ ಬಸ್ಸುಗಳು ಆಗಮಿಸಿವೆ.
ಉತ್ತರಕನ್ನಡಕ್ಕೆ ಬಂದ 4 oxy bus ಓದಿ: ಅಲಿಗಢ ಮದ್ಯ ದುರಂತ: ಮೃತರ ಸಂಖ್ಯೆ 55ಕ್ಕೆ ಏರಿಕೆ
ಬೆಂಗಳೂರಿನ ಇಂಡಿ ವಿಲೇಜ್ ಎನ್ನುವ ಸ್ವಯಂಸೇವಾ ಸಂಸ್ಥೆ ಈ ಆಕ್ಸಿ (oxy) ಬಸ್‌ಗಳನ್ನು ಸರ್ಕಾರಕ್ಕೆ ನೀಡಿದ್ದು, ಸರ್ಕಾರ ಸಮನ್ವಯದೊಂದಿಗೆ ಈ ಬಸ್ ಕಾರ್ಯನಿರ್ವಹಿಸಲಿವೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು, ಅದರಲ್ಲೂ ಕೆಲ ಜಿಲ್ಲೆಗಳಲ್ಲಿ ಬೆಡ್ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಸೋಂಕಿತರಿಗೆ ಬೆಡ್ ಸಿಗುವವರೆಗೆ ಆಮ್ಲಜನಕ ಪೂರೈಸಲು ಈ ಆಕ್ಸಿ ಬಸ್ಸುಗಳನ್ನು ನೀಡಲಾಗಿದೆ.
ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು ಇರುವ ಈ ಬಸ್ಗಳು ಜಿಲ್ಲೆಯ ಕಾರವಾರ, ಹೊನ್ನಾವರ, ಶಿರಸಿ ಹಾಗೂ ದಾಂಡೇಲಿಯಲ್ಲಿ ನಿಲುಗಡೆಯಾಗಲಿವೆ. ಅಲ್ಲಿಂದ ತನ್ನ ವ್ಯಾಪ್ತಿಯಲ್ಲಿ ಎಲ್ಲೇ ಉಸಿರಾಟದ ಸಮಸ್ಯೆ ಕರೆ ಬಂದರೆ ಅಲ್ಲಿಗೆ ತೆರಳಿ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡುವ ಕಾರ್ಯ ಮಾಡಲಿದ್ದು, ಬಸ್ಸಿನಲ್ಲಿರುವ ಸಲಕರಣೆಗಳ ಮೂಲಕ ದೇಹದಲ್ಲಿ ಆಮ್ಲಜನಕ ಮಟ್ಟ 95ಕ್ಕೆ ಏರಿಸಲು ಸಹಾಯವಾಗಲಿದೆ ಎನ್ನಲಾಗಿದೆ.
ಭೌಗೋಳಿಕವಾಗಿ ಅತಿದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಸೋಂಕಿತರ ಸಂಖ್ಯೆ ಸಹ ಅಧಿಕವಾಗಿದೆ. ಹಲವರು ಹೋಂ ಕ್ವಾರಂಟೈನ್‌ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ಉಸಿರಾಟ ಸಮಸ್ಯೆ ಎದುರಾಗುವ ಸೋಂಕಿತರಿಗೆ ಇನ್ನು ಮುಂದೆ ಈ ಬಸ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಲು ಸಹಾಯವಾಗಲಿದೆ ಎನ್ನಲಾಗಿದೆ.