ಶಿವಮೊಗ್ಗ :ಸವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಸಾಧಿಸಿ ತೋರಿಸಿದ ಸಾಧನೆಯ ನಾಯಕ ಬಿ ಎಸ್ ಯಡಿಯೂರಪ್ಪ ಎಂದು ಮಾಜಿ ವಿಧಾನ ಪರಿಷತ್ ಸಭಾಪತಿ ಡಿ ಹೆಚ್ ಶಂಕರ ಮೂರ್ತಿ ಹೇಳಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿರುವುದರ ಕುರಿತು ಅವರು ಈಟಿವಿ ಭಾರತ್ ಜೊತೆ ಮಾತನಾಡಿದರು. ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಸಮಯದಿಂದ ಈವರೆಗೂ ಅನೇಕ ಸವಾಲುಗಳನ್ನು ಎದುರಿಸಿ ಅವುಗಳನ್ನು ಸಾಧಿಸಿ ತೋರಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಏಕಾಂಗಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪ್ರವಾಹದ ಪರಿಸ್ಥಿತಿ ಅವಲೋಕಿಸಿದರು ಎಂದರು.
ಕೊರೊನಾ ಸಂದರ್ಭದಲ್ಲಿಯೂ ಸಹ ಸವಾಲನ್ನು ಎದುರಿಸಿ ಗೆದ್ದಿದ್ದಾರೆ. ಪಕ್ಷದ ಸಿದ್ದಾಂತದಂತೆ 75 ವರ್ಷ ಮೇಲ್ಪಟ್ಟವರು ರಾಜಕೀಯ ನಿವೃತ್ತಿ ಹೊಂದುವುದು ಪದ್ಧತಿ. ಅದರಂತೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ಮಟ್ಟದಲ್ಲೂ ಸಹ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ ಅನೇಕ ನಾಯಕರು ರಾಜಕೀಯ ನಿವೃತ್ತಿ ಹೊಂದಿದ್ದಾರೆ. ಅದರಂತೆ ಇವರು ಯುವಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ರೈತರಿಗೆ ಕೃಷಿ ಬಜೆಟ್, ಶಾಲಾ ಮಕ್ಕಳಿಗೆ ಬೈಸಿಕಲ್, ಗೋಹತ್ಯೆ ನಿಷೇಧ ಕಾಯ್ದೆ, ಭಾಗ್ಯಲಕ್ಷ್ಮಿ ಯೋಜನೆ ಸೇರಿ ಅನೇಕ ಜನಪರ ಯೋಜನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.