ಕಾರವಾರ: ಸಾಗರಮಾಲಾ ಯೋಜನೆಯಡಿ ಎರಡನೇ ಹಂತದ ಬಂದರು ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ ಹೋರಾಟ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದೆ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಶಾಸಕಿ ರೂಪಾಲಿ ನಾಯ್ಕ ಆರೋಪಕ್ಕೆ ಮಾಜಿ ಶಾಸಕ ಸತೀಶ್ ಸೈಲ್ ತಿರುಗೇಟು ನೀಡಿದ್ದಾರೆ.
ಕಾರವಾರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಗರಮಾಲ ಯೋಜನೆಯಡಿ ಬಂದರು ಅಭಿವೃದ್ಧಿ ಕಾಮಗಾರಿಯನ್ನು ಈ ಹಿಂದೆ ಉದ್ಘಾಟನೆ ಮಾಡಿದ ನನ್ನ ವಿರುದ್ಧ ಶಾಸಕಿ ರೂಪಾಲಿ ನಾಯ್ಕ ಹಾಗೂ ಅವರ ಬೆಂಬಲಿಗರು ನಿರಂತರ ಆರೋಪ ಮಾಡುತ್ತಿದ್ದಾರೆ. ಆದರೆ ನಗರದಲ್ಲಿ ಬಂದ್ಗೆ ಕರೆ ನೀಡಿದ್ದ ಕಾರಣ ಸುಮ್ಮನಿದ್ದೆ. ಇದು ಕೇಂದ್ರ ಸರ್ಕಾರದ ಯೋಜನೆ, ನಾನು ಅಂದೇ ಈ ಯೋಜನೆಯನ್ನು ವಿರೋಧ ಮಾಡಿದ್ದೇನೆ. ಇದು ಯಾವುದನ್ನು ತಿಳಿದುಕೊಳ್ಳದ ಶಾಸಕಿ, ಬೆಂಗಳೂರಿನಲ್ಲಿ ನನ್ನ ವಿರುದ್ಧ ಸಚಿವರುಗಳಿಗೆ ಸುಳ್ಳು ಮಾಹಿತಿ ನೀಡಿ ತಪ್ಪು ಕಲ್ಪನೆ ಬರುವ ಹಾಗೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ತಪ್ಪು ಮಾಹಿತಿ ನೀಡುವುದನ್ನು ಬಿಟ್ಟು, ಸ್ಥಳದಲ್ಲಿ ಬಂದು ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.