ಕಾರವಾರ: ಚಿಕ್ಕ ವಯಸ್ಸಿನಲ್ಲಿಯೇ ಬ್ಲಡ್ ಕ್ಯಾನ್ಸರ್ಗೆ ತುತ್ತಾಗಿ ಹಾಸಿಗೆ ಹಿಡಿದ ಪುಟ್ಟ ಕಂದನ ಚಿಕಿತ್ಸೆಗಾಗಿ ಪಾಲಕರು ಪರದಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಿಂದ ತಿಳಿದ ಮಾಜಿ ಶಾಸಕ ಮಂಕಾಳ್ ವೈದ್ಯ ತಕ್ಷಣ ಅವರನ್ನು ಸಂಪರ್ಕಿಸಿ ತಮ್ಮ ಹುಟ್ಟು ಹಬ್ಬದ ದಿನದಂದು ಮಗುವಿನ ಚಿಕಿತ್ಸೆಗೆ 20 ಸಾವಿರ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಹೌದು, ಕುಮಟಾ ತಾಲ್ಲೂಕಿನ ಕಾಗಾಲದ ರಿತಿ ಪ್ರಸಾದ್ ಜೈನ್ ಎಂಬ ಐದು ವರ್ಷದ ಹೆಣ್ಣು ಮಗು ಬ್ಲಡ್ ಕ್ಯಾನ್ಸರ್ಗೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಮೇ 25 ರಂದು ದಾಖಲಿಸಲಾಗಿದೆ. ಚಿಕಿತ್ಸೆಗೆ ಬರೊಬ್ಬರಿ 10 ರಿಂದ 15 ಲಕ್ಷ ತಗಲುವ ಬಗ್ಗೆ ವೈದ್ಯರು ತಿಳಿಸಿದ್ದು, ಪೆಟ್ರೋಲ್ ಬಂಕ್ನಲ್ಲಿ ದುಡಿಯುತ್ತಿದ್ದ ಮಗುವಿನ ತಂದೆಗೆ ಇಷ್ಟೊಂದು ಹಣ ಹೊಂದಿಸುವುದು ಕಷ್ಟಸಾಧ್ಯವಾಗಿದೆ.
ಇದನ್ನು ತಿಳಿದ ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಪರಿಸ್ಥಿತಿ ವಿವರಿಸಿ ಆರ್ಥಿಕ ಸಹಾಯಕ್ಕಾಗಿ ಕೋರಿದ್ದರು. ಈ ಬಗ್ಗೆ ತಿಳಿದ ವೈದ್ಯರ ಹಿತೈಸಿಯೋರ್ವರು ಮಂಕಾಳ್ ವೈದ್ಯರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಮಂಕಾಳ್ ವೈದ್ಯರು ನೆರವಿನ ಹಸ್ತ ಚಾಚಿದ್ದಾರೆ. ನಂತರ ಮಗುವಿನ ಪಾಲಕರೇ ಖುದ್ದಾಗಿ ಬಂದು ಮಗುವಿನ ಸಮಸ್ಯೆ ಮತ್ತು ಚಿಕಿತ್ಸೆಗಾಗಿ ಒಂದು ತಿಂಗಳು ಆಸ್ಪತ್ರೆಯಲ್ಲಿ ಇರಬೇಕಾದ ಪರಿಸ್ಥಿತಿ ಬಗ್ಗೆ ವಿವರಿಸಿದರು. ತಕ್ಷಣ ಮಗುವಿನ ಚಿಕಿತ್ಸೆಗೆ 20 ಸಾವಿರ ಹಣ ನೀಡಿ ಧೈರ್ಯ ಹೇಳಿದ್ದಾರೆ.