ಕಾರವಾರ:ರಸ್ತೆಯಂಚಿನ ಗಟಾರದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಲ್ಲಿ ಸೆರೆ ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಬಾಡ ಐಟಿಐ ಕಾಲೇಜು ಬಳಿಯ ಗಟಾರದಲ್ಲಿ ಮಲಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡ ಸ್ಥಳೀಯರು ಕಂಗಾಲಾಗಿದ್ದರು. ಎಂದೂ ನೋಡಿರದಂತಹ ಬೃಹತ್ ಹೆಬ್ಬಾವನ್ನು ಕಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಿದ್ದರು.
ಕಾರವಾರದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ ಸ್ಥಳಕ್ಕಾಗಮಿಸಿದ ಡೆಪ್ಯೂಟಿ ಆರ್ಎಫ್ಒ ಹನುಮಂತ, ಅರಣ್ಯ ರಕ್ಷಕ ಗೋಪಾಲ ನಾಯ್ಕ, ವಾಚರ್ ಸಂಜೀವ್ ಹಾಗೂ ನಿಲೇಶ್ ಎಂಬುವವರು ಸ್ಥಳೀಯರ ಸಹಕಾರದಲ್ಲಿ ಒಮ್ಮೆ ಹೆಬ್ಬಾವನ್ನು ಹಿಡಿದಿದ್ದರಾದರೂ ಹಾವು ತಪ್ಪಿಸಿಕೊಂಡ ಕಾರಣ ಮತ್ತೊಮ್ಮೆ ಹರಸಾಹಸದೊಂದಿಗೆ ಸ್ಥಳೀಯರ ಸಹಕಾರದಲ್ಲಿ ಹಿಡಿದು ಪ್ಲ್ಯಾಸ್ಟಿಕ್ ಬ್ಯಾರಲ್ನಲ್ಲಿ ತುಂಬಿದರು.
ಸುಮಾರು 14 ಅಡಿ ಉದ್ದವಾಗಿದ್ದ ಈ ಹೆಬ್ಬಾವು 65 ಕೆಜಿ ತೂಕ ಹೊಂದಿದೆ. ಈ ಭಾಗದಲ್ಲಿ ಗಜನಿ ಭೂಮಿ ಮತ್ತು ಕೆರೆ ಇರುವುದರಿಂದ ಹೆಬ್ಬಾವುಗಳಿಗೆ ಬೇಕಾದ ಆಹಾರ ಹೇರಳವಾಗಿ ಸಿಗುತ್ತದೆ. ಕಳೆದ 15 ದಿನದ ಅವಧಿಯಲ್ಲಿಯೇ ಮೂರು ಹೆಬ್ಬಾವುಗಳನ್ನು ಈ ಪ್ರದೇಶದ ಸುತ್ತಮುತ್ತ ಹಿಡಿಯಲಾಗಿದೆ. ಎರಡು ವರ್ಷಗಳ ಬಳಿಕ ಇಷ್ಟೊಂದು ದೊಡ್ಡ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು ಹಾವನ್ನು ಸುರಕ್ಷಿತವಾಗಿ ಹಿಡಿದು ಅಣಶಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿರುವುದಾಗಿ ಗೋಪಾಲ್ ನಾಯ್ಕ ತಿಳಿಸಿದ್ದಾರೆ.