ಕಾರವಾರ:ವಿಶೇಷ ಕಲೆ, ಸಂಸ್ಕೃತಿಯ ಜೊತೆಗೆ ವಿಭಿನ್ನ ಉಡುಗೆ-ತೊಡುಗೆಗಳಿಂದ ಗುರುತಿಸಿಕೊಂಡಿರುವ ಹಾಲಕ್ಕಿ ಸಮುದಾಯ ಹಿಂದುಳಿದ ಸಮಾಜಗಳಲ್ಲೊಂದು. ಇಂತಹ ಸಮುದಾಯದ ಬಗ್ಗೆ ಆಕರ್ಷಿತರಾದ ವಿದೇಶಿ ಮಹಿಳೆಯರು ಪದ್ಮಶ್ರೀ ವಿಜೇತೆ ಸುಕ್ರಿ ಬೊಮ್ಮಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಪದ್ಮಶ್ರೀ ವಿಜೇತೆ ಸುಕ್ರಜ್ಜಿಯೊಂದಿಗೆ ವಿದೇಶಿ ಮಹಿಳೆಯರ ನೃತ್ಯ.. ಜರ್ಮನಿಯ ಮಾಕ್ಸ್ ಮಿಲಿನ್ ಹಾಗೂ ಆಸ್ಟ್ರೇಲಿಯಾದ ವಲೆರಿ ಸ್ಟ್ರೋಬೆಲ್ ಎಂಬುವವರು ಹಾಲಕ್ಕಿ ಉಡುಗೆ ತೊಟ್ಟು ಸುಕ್ರಿ ಬೊಮ್ಮ ಗೌಡ ಅವರೊಂದಿಗೆ ಸಾಂಪ್ರದಾಯಿಕ ನೃತ್ಯ ಮಾಡಿದ್ದಾರೆ.
ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಇವರು ಹಾಲಕ್ಕಿ ಇಂಚರ ಕಾರ್ಯಕ್ರಮದಡಿ ಸುಕ್ರಿ ಬೊಮ್ಮ ಗೌಡ ಅವರ ಮನೆಗೆ ಅಧ್ಯಯನ ಪ್ರವಾಸಕ್ಕೆ ಆಗಮಿಸಿದ್ದರು. ಹಾಲಕ್ಕಿ ಸಮುದಾಯದ ಉಡುಪು ಹಾಗೂ ಮಣಿಸರ ಧರಿಸಿದ ಈ ಇಬ್ಬರು ವಿದೇಶಿಗರು ಹಾಲಕ್ಕಿ ಸಂಪ್ರದಾಯದ ಥಾರ್ಲೆ ನೃತ್ಯ ಮಾಡಿ ಗಮನ ಸೆಳೆದರು.
ಸುಕ್ರಜ್ಜಿ ಮನೆಯಲ್ಲಿ ಎರಡು ದಿನಗಳ ಕಾಲ ತಂಗಿ ಸಮುದಾಯದ ವೇಷಭೂಷಣ, ಕಲೆ, ಸಂಸ್ಕೃತಿ ಬಗ್ಗೆ ಮಾಹಿತಿ ಪಡೆದುಕೊಂಡು ವಾಪಾಸ್ಸು ತೆರಳಿದ್ದಾರೆ.