ಹೊನ್ನಾವರ/ಭಟ್ಕಳ:ಕೊರೊನಾ ನಿಯಂತ್ರಣಕ್ಕಾಗಿ ವಿಧಿಸಿದ್ದ ಲಾಕ್‍ಡೌನ್ ತೆರವಾಗಿದ್ದರೂ ಹೂವಿನ ವ್ಯಾಪಾರ ಮಾತ್ರ ಮೊದಲಿನಂತೆ ಕುದುರದಿರುವುದು ಹೂವಿನ ವ್ಯಾಪಾರಿಗಳ ಚಿಂತೆಗೆ ಕಾರಣವಾಗಿದೆ.
ಸಮಾರಂಭಗಳಿಗೆ ಜನ ಸೇರುವ ಮಿತಿಯನ್ನು 50 ಜನರಿಗೆ ಸೀಮಿತಗೊಳಿಸಿರುವುದರಿಂದ ಮದುವೆ, ಮುಂಜಿಯಂತ ಶುಭ ಕಾರ್ಯಗಳು ಮೊದಲಿನ ಅದ್ದೂರಿತನವನ್ನು ಕಳೆದುಕೊಂಡಿವೆ. ಪ್ರತಿಷ್ಠೆಯ ಪ್ರದರ್ಶನ ಸಾಧ್ಯವಾಗದ ಹಿನ್ನೆಲೆಯಲ್ಲಿ ವೆಚ್ಚದಾಯಕ ಮದುವೆ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿರುವುದು ಹೂವಿನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ.
ದೇವಾಲಯಗಳು ಬಾಗಿಲು ತೆರೆದು ಭಕ್ತರಿಗೆ ದರ್ಶನ ಭಾಗ್ಯವನ್ನು ನೀಡಿದ್ರೂ ದೇವಾಲಯದಲ್ಲಿ ಭಕ್ತರಿಂದ ಯಾವುದೇ ಪೂಜೆ-ಪುನಸ್ಕಾರಗಳಿಗೆ ಅವಕಾಶ ಇಲ್ಲದಿರುವುದೂ ಹೂವಿನ ಮಾರಾಟದ ಕುಸಿತಕ್ಕೆ ಕಾರಣವಾಗಿದೆ. ಹೊನ್ನಾವರ ಪಟ್ಟಣದಲ್ಲಿಯೇ 25ಕ್ಕೂ ಹೆಚ್ಚು ಮಂದಿ ಹೂವಿನ ವ್ಯಾಪಾರದಿಂದಲೇ ಬದುಕು ಕಟ್ಟಿಕೊಂಡವರಿದ್ದಾರೆ. ಇಡಗುಂಜಿ, ಮುಗ್ವಾ ಸುಬ್ರಹ್ಮಣ್ಯದಂತ ದೇವಾಲಯಗಳ ಸಮೀಪವಿದ್ದ ಹತ್ತಾರು ಹೂವಿನಂಗಡಿ ಮಾಲೀಕರಿಗೆ ದುಡಿಮೆ ಇಲ್ಲದೆ ನಾಲ್ಕು ತಿಂಗಳುಗಳೇ ಉರುಳಿದೆ.
ಮಂಕಿ,ಬಣಸಾಲೆ,ಗುಣವಂತೆ, ಕವಲಕ್ಕಿ, ಹಡಿನಬಾಳ, ಗೇರಸೊಪ್ಪ, ಹಳದಿಪುರ, ಕರ್ಕಿ ಮುಂತಾದ ಜನರ ಓಡಾಟ ಅಧಿಕವಿರುವ ಕಡೆಯಲ್ಲೆಲ್ಲಾ ಕನಿಷ್ಠ ಒಂದೆರಡಾದ್ರೂ ಹೂವಿನಂಗಡಿಯನ್ನು ಕಾಣಬಹುದಾಗಿದೆ. ಇವರೆಲ್ಲರ ಸ್ಥಿತಿಯೂ ಪಟ್ಟಣದಲ್ಲಿದ್ದವರಿಗಿಂತ ಭಿನ್ನವಾಗೇನೂ ಇಲ್ಲ.
ತಾಲೂಕಿನಲ್ಲಿರುವ 60ಕ್ಕೂ ಹೆಚ್ಚು ಹೂವಿನಂಗಡಿ ಮಾಲೀಕರ ಸ್ಥಿತಿಯೂ ಒಂದೇ ಆಗಿದೆ. ದಿನಬೆಳಗಾದ್ರೆ ಗ್ರಾಹಕರ ಬರುವಿಕೆಯ ಹಾದಿ ನಿರೀಕ್ಷಿಸುವುದೇ ಆಗಿದೆ. ಬೇಸಿಗೆಯ ಹಬ್ಬ ಹರಿದಿನಗಳ ಸಮಯದಲ್ಲಿ ಬಯಲುಸೀಮೆಯ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಹೂವನ್ನು ತಂದು ಸುರಿದು ನಮ್ಮ ವ್ಯಾಪಾರ ಕಸಿದರು. ನಂತರ ಕೊರೊನಾ ಕಾಟ ಶುರುವಾಗಿದ್ದು, ಇನ್ನೂ ನಿಂತಿಲ್ಲ. ಮುಂದೇನು ಎಂದು ತಿಳಿಯುತ್ತಿಲ್ಲ ಎಂದು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ ವ್ಯಾಪಾರಿಗಳು.
ಮೈಸೂರು ಹಾಗೂ ತುಮಕೂರಿನಿಂದ ಹೂವನ್ನು ಬಸ್‍ಗಳಲ್ಲಿ ತರಿಸಲಾಗುತ್ತದೆ. ಬಸ್ ಮೂಲಕ ತರಿಸಿದ್ರೆ ಒಂದು ಬಂಡಲ್‍ಗೆ 300 ರೂಪಾಯಿ ಸಾರಿಗೆ ವೆಚ್ಚವಾದ್ರೆ, ಲಾಕ್‍ಡೌನ್ ಸಮಯದಲ್ಲಿ ಬಾಡಿಗೆ ಮಾಡಿಕೊಂಡು ಹೂವನ್ನು ತರಿಸಿದಾಗ 800 ರೂ. ಖರ್ಚಾಗಿದೆ. ಮಾರುಕಟ್ಟೆ ಇಲ್ಲವಾದ್ರೂ ಸಾರಿಗೆ ವೆಚ್ಚ, ಬೆಳೆ ನಷ್ಟ ಮುಂತಾದ ಕಾರಣಗಳಿಂದ ಹೂವಿನ ರೇಟು ಮಾತ್ರ ಅಷ್ಟೇನೂ ಕಡಿಮೆಯಾಗಿಲ್ಲ.