ಕಾರವಾರ:ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ಆರ್ಭಟ ಜೋರಾಗಿದೆ. ಕಳೆದ ಎರಡು ದಿನದಿಂದ ಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲಪ್ರವಾಹ ಸೃಷ್ಟಿಯಾಗಿ, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಧಾರಾಕಾರ ಮಳೆಯಿಂದಾಗಿ ಕರಾವಳಿ ತೀರದ ತಾಲೂಕುಗಳು ಅಕ್ಷರಶಃ ಜಲಾವೃತ್ತವಾಗಿವೆ. ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು ಜನವಸತಿ ಪ್ರದೇಶಗಳು ನೀರು ತುಂಬಿಕೊಂಡು ಕೆರೆಯಂತಾಗಿವೆ. ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ನಿನ್ನೆ ತಡರಾತ್ರಿಯಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು ಕುಮಟಾ ತಾಲೂಕಿನ ಬಡಗಣಿ ಹಳ್ಳ ಉಕ್ಕಿ ಹರಿದ ಪರಿಣಾಮ ಕೂಜಳ್ಳಿ, ಕೋನಳ್ಳಿ, ಚಂದಾವರ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು ಗ್ರಾಮೀಣ ಪ್ರದೇಶಗಳು ಕೆರೆಯಂತಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕಾರವಾರ ನಗರದ ವಿವಿಧೆಡೆ ಸಹ ಮಳೆಯ ನೀರು ನಿಂತ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ಹರಿದು ಮನೆಗಳು ಜಲಾವೃತಗೊಂಡಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳದಲ್ಲಿ ನೀರು ತುಂಬಿ ಅನಾವೃಷ್ಟಿ ಸೃಷ್ಟಿಸುತ್ತಿದ್ದರು ಈ ಬಗ್ಗೆ ಯಾವುದೇ ಶಾಸ್ವತ ಪರಿಹಾರ ಸಿಕ್ಕಿಲ್ಲ. ಇಲ್ಲಿನ ಬಡಗಣಿ ಹಳ್ಳದಲ್ಲಿ ಹೂಳು ತುಂಬಿಕೊಂಡ ಕಾರಣ ಇಂತಹದೊಂದು ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ.