ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಮಳೆ ಅನಾಹುತ: ನಾಳೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುವರೇ ಸಿಎಂ? - CM BSY Visits flood affected area in Uttarakannada

ಇಂದು ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ದಿಢೀರ್ ಆಗಿ ಸುದ್ದಿಗೋಷ್ಠಿ ನಡೆಸಿ, 'ಸಾಧ್ಯವಾದರೆ ಕಾರವಾರಕ್ಕೆ ಜುಲೈ 26ರಂದು ಮಧ್ಯಾಹ್ನ ಭೇಟಿ ನೀಡುತ್ತೇನೆ' ಎಂದು ತಿಳಿಸಿದ್ದಾರೆ.

CM B. S. Yadiyurappa
ಸಿಎಂ ಬಿ. ಎಸ್. ಯಡಿಯೂರಪ್ಪ

By

Published : Jul 25, 2021, 9:18 PM IST

ಕಾರವಾರ: ಮುಖ್ಯಮಂತ್ರಿ ಬದಲಾವಣೆ ವಿಚಾರದ ನಡುವೆಯೂ ಪ್ರವಾಹದಿಂದಾಗಿ ಹಾನಿಗೊಳಗಾದ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಪ್ರವಾಹದಿಂದಾಗಿ ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಾರವಾರ, ಅಂಕೋಲಾ, ಕುಮಟಾ ಭಾಗದಲ್ಲಿ ನೂರಾರು ಗ್ರಾಮಗಳು ಮುಳುಗಡೆಯಾಗಿದ್ದವು. 7 ಜನ ಮೃತಪಟ್ಟು ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಅಲ್ಲದೆ ಹಲವು ಹೆದ್ದಾರಿ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಬಗ್ಗೆ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಬಳಿ ಪರಿಸ್ಥಿತಿ ಬಗ್ಗೆ ತಿಳಿಸಿ ಒಮ್ಮೆ ಭೇಟಿ ನೀಡುವಂತೆ ಮತ್ತು ಹೆಚ್ಚಿನ ಪರಿಹಾರಕ್ಕಾಗಿ ವಿನಂತಿಸಿದ್ದಾರೆ ಎನ್ನಲಾಗಿದೆ.

ಬೆಳಗಾವಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರ‌ ಬಗ್ಗೆ ಮಾತನಾಡಿರುವ ಅವರು, ಸಾಧ್ಯವಾದರೆ ಕಾರವಾರಕ್ಕೆ ಸೋಮವಾರ ತೆರಳುವ ಬಗ್ಗೆ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಯಡಿಯೂರಪ್ಪ ಅವರ ಉತ್ತರಕನ್ನಡ ಪ್ರವಾಸಕ್ಕೆ ಹಲವು ಬಾರಿ ದಿನ ನಿಗದಿಯಾಗಿದ್ದರೂ ಕಾರಣಾಂತರಗಳಿಂದ ರದ್ದುಪಡಿಸಿ, ಮುಂದೂಡಲಾಗುತ್ತಿತ್ತು.

ತೀರಾ ಇತ್ತೀಚೆಗೆ ಜುಲೈ 16ರಂದು ಕೂಡ ಅವರು ಕಾರವಾರಕ್ಕೆ ಭೇಟಿ ನೀಡಿ, ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ವಿವಿಧ ಕಾಮಗಾರಿಗಳಿಗೆ ಅವರು ಚಾಲನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂಬ ಬಗ್ಗೆ ಸ್ಥಳೀಯ ಬಿಜೆಪಿಗರು ತಿಳಿಸಿದ್ದರು‌. ಅಧಿಕಾರಿಗಳು ಮುಖ್ಯಮಂತ್ರಿ ಸ್ವಾಗತಕ್ಕಾಗಿ ಬಹುತೇಕ ಸಿದ್ಧತೆ ಪೂರ್ಣಗೊಳಿಸಿಕೊಂಡಿದ್ದರು.

ಆದರೆ ಪ್ರಧಾನಿಯೊಂದಿಗೆ ಅಂದೇ ಸಭೆ ನಿಗದಿಯಾದ ಕಾರಣ, ಸಿಎಂ ಪ್ರವಾಸ ನಿಗದಿಯಾಗಿದ್ದ ದಿನಕ್ಕೂ ಎರಡು ದಿನ ಮುಂಚೆ ಕಾರ್ಯಕ್ರಮ ಮುಂದೂಡಿ ಸಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿತ್ತು. ಆದರೆ ಜುಲೈ 23ಕ್ಕೆ ಯಡಿಯೂರಪ್ಪ ಬರಲಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದರು.

ಅಂತಿಮವಾಗಿ ಅಂದು ಕೂಡ ಬರಲಿಲ್ಲ. ಕಾರಣ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸುದ್ದಿಯಲ್ಲಿದೆ. ಹೀಗಾಗಿ ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುವುದು ಅನುಮಾನ ಎಂದೇ ಹೇಳಲಾಗಿತ್ತು. ಆದರೆ ಇಂದು ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ದಿಢೀರ್ ಆಗಿ ಸುದ್ದಿಗೋಷ್ಠಿಯಲ್ಲಿ 'ಸಾಧ್ಯವಾದರೆ ಕಾರವಾರಕ್ಕೆ ಜುಲೈ 26ರಂದು ಮಧ್ಯಾಹ್ನ ಭೇಟಿ ನೀಡುತ್ತೇನೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಾರ್ಷಲ್‌ ಆರ್ಟ್ಸ್‌ನಲ್ಲಿ ಬೆರಗು ಮೂಡಿಸುವಂತಿದೆ ರಿಷಬ್ ಶೆಟ್ಟಿ ಸಾಧನೆ

ABOUT THE AUTHOR

...view details