ಕಾರವಾರ(ಉತ್ತರ ಕನ್ನಡ): 2019 ಹಾಗೂ 2021ರಲ್ಲಿ ಉಂಟಾಗ ಪ್ರವಾಹಕ್ಕೆ ಅನೇಕ ಮಂದಿ ಮನೆ ಕಳೆದುಕೊಂಡಿದ್ದರು. ಘಟನೆ ನಡೆದು ಎರಡು ವರ್ಷಗಳಾಗುತ್ತ ಬಂದರೂ ಸರ್ಕಾರ ಮಾತ್ರ ಪರಿಹಾರ ನೀಡಿಲ್ಲ. ಹೀಗಾಗಿ, ನ್ಯಾಯಕ್ಕಾಗಿ ನಿತ್ಯ ಕಚೇರಿಗೆ ಗ್ರಾಮಸ್ಥರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ವಿರ್ಜೆ ಗ್ರಾಮಸ್ಥರು ತಮಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕದ್ರಾ ಜಲಾಶಯದ ಸಮೀಪದಲ್ಲೇ ಇರುವ ಈ ಗ್ರಾಮದಲ್ಲಿ 2019 ಹಾಗೂ 21ರಲ್ಲಿ ದೊಡ್ಡ ಪ್ರಮಾಣದಲ್ಲಿಯೇ ನೆರೆ ಸೃಷ್ಟಿಯಾಗಿತ್ತು. 2019ರಲ್ಲಿ ಮನೆಗಳನ್ನು ಕಳೆದುಕೊಂಡವರು ಕಷ್ಟಪಟ್ಟು ರಿಪೇರಿ ಮಾಡಿಸಿಕೊಂಡಿದ್ದರು. ಮತ್ತೆ 2021ರಲ್ಲಿ ಪ್ರವಾಹವಾಗಿ ಮನೆಗಳು ಉರುಳಿ ಬಿದ್ದಿದ್ದವು. ಹೀಗಾಗಿ ಅನೇಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ಸರ್ಕಾರ ಮಾತ್ರ ಈವರೆಗೂ ಮನೆ ಕಳೆದುಕೊಂಡವರಿಗೆ ಯಾವುದೇ ಪರಿಹಾರ ನೀಡಿಲ್ಲ. ಅತಿಕ್ರಮಣ ಭೂಮಿಯಲ್ಲಿ ಮನೆ ಇದೆ ಎನ್ನುವ ಒಂದೇ ಕಾರಣಕ್ಕೆ ಇನ್ನೂ ಪರಿಹಾರ ಬಿಡುಗಡೆ ಮಾಡದೇ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿವೆ.