ಎರಡು ತಿಂಗಳ ಕಾಲ ಮೀನುಗಾರಿಕೆಗೆ ನಿಷೇಧ ಕಾರವಾರ: ದೇಶದ ಕರಾವಳಿಯಾದ್ಯಂತ ಎರಡು ತಿಂಗಳ ಕಾಲ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಬೀಳಲಿದೆ. ಜೂನ್ 1 ರಿಂದ ಜುಲೈ 31 ರವರೆ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗುತ್ತಿದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುವುದರಿಂದ ಮೀನುಗಳ ಮೊಟ್ಟೆಗಳು ಮತ್ತು ಮರಿಗಳು ನಾಶವಾಗಬಾರದು ಎಂಬ ಕಾರಣಕ್ಕೆ 61 ದಿನಗಳ ಕಾಲ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಲಾಗುತ್ತದೆ.
ಜೊತೆಗೆ ಜೂನ್ - ಜುಲೈ ಅವಧಿಯಲ್ಲಿ ವೇಗವಾಗಿ ಬೀಸುವ ಗಾಳಿಯಿಂದ ಸಮುದ್ರದ ಅಲೆಗಳ ರಭಸ ಹೆಚ್ಚಾಗಿರುತ್ತದೆ. ಇದರಿಂದ ಮೀನುಗಾರರಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಮೀನುಗಾರಿಕೆ ಇಲಾಖೆ ಆದೇಶ ಮಾಡಿದೆ.
ಈ ಬಗ್ಗೆ ಜಿಲ್ಲಾ ಸಹಕಾರ ಮೀನು ಮಾರಾಟಗಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಮೀನುಗಾರಿಕೆ ಉದ್ಯಮ ಆರಂಭದಲ್ಲಿ ಕೊಂಚ ಚೇತರಿಕೆ ಕಂಡರೂ ಕಳೆದ ಕೆಲ ತಿಂಗಳಿಂದ ಕಡಿಮೆಯಾಗಿದೆ. ಇದರಿಂದ ಮೀನು ಸಿಗದೇ ಖಾಲಿ ಬೋಟ ವಾಪಸ್ ಆಗಿವೆ. ಅದರಲ್ಲಿಯೂ ಫಿಶಿಂಗ್ ಬೋಟ್ ನವರು ಕೊನೆಯಲ್ಲಿ ಮೀನುಗಾರಿಕೆ ನಡೆಯದೇ ನಷ್ಟ ಅನುಭವಿಸಿದ್ದಾರೆ. ಆದರೆ, ಒಂದಿಷ್ಟು ಲಾಭ ಪಡೆದವರು ಸಾಲ ತುಂಬಿ ಪುನಃ ಸಾಲ ಪಡೆಯಲು ಅನುಕೂಲವಾಗಿದೆ. ಗಂಗಾಮಾತೆ ಅನುಗ್ರಹದಿಂದ ಮುಂದಿನ ಸಿಸನ್ನಲ್ಲಿ ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಪ್ರತಿ ವರ್ಷವೂ ನೈಋತ್ಯ ಮುಂಗಾರು ಮಳೆ ಆರಂಭ ವೇಳೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಯನ್ನು ಬಂದ್ ಮಾಡಲಾಗುತ್ತದೆ. ಆದರೆ ಮತ್ಸ್ಯ ಕ್ಷಾಮ ಮೀನುಗಳನ್ನು ಹಿಡಿಯಲು ತೆರಳುವ ಬೋಟ್‌ಗಳಿಗೆ ಮಾಡುವ ಖರ್ಚಿಗಿಂತ ಕಡಿಮೆ ಪ್ರಮಾಣದಲ್ಲಿ ಮೀನುಗಳು ದೊರೆಯುವ ಕಾರಣ ಅವಧಿಗೂ ಮುನ್ನವೇ ಆಳ ಸಮುದ್ರದ ಮೀನುಗಾರಿಕೆಯನ್ನು ಕಡಲ ಮಕ್ಕಳು ಬಂದ್ ಮಾಡಿದ್ದಾರೆ. ಹೀಗಾಗಿ ಬಹುತೇಕ ಬೊಟ್ಗಳು ಅವಧಿಗೂ ಮೊದಲೇ ಲಂಗರು ಹಾಕಿವೆ. ಅಳಿದುಳಿದ ಬೋಟ್ಗಳು ಕೂಡ ಎರಡು ತಿಂಗಳು ಸುದೀರ್ಘ ರಜೆ ಇರುವ ಕಾರಣ ಲಂಗರು ಹಾಕಲಾಗುತ್ತಿದೆ.
ಈ ಬಗ್ಗೆ ಮೀನುಗಾರರಾದ ಉಮೇಶ ದುರ್ಗೇಕರ್ ಮಾತನಾಡಿ, ಬೋಟ್ಗಳ ಲಂಗರು ಹಾಕಿ, ಬಲೆಗಳನ್ನು ತೊಳೆದು ಒಣಗಿಸಿ ಜೋಪಾನ ಮಾಡುವಲ್ಲಿ ಬಹುತೇಕ ಮೀನುಗಾರರು ನಿರತರಾಗಿದ್ದಾರೆ. ಅಲ್ಲದೇ ಬೋಟ್ ರಿಪೇರಿ ಕೂಡ ಇದೇ ಎರಡು ತಿಂಗಳ ಬಿಡುವಿನಲ್ಲಿ ಕೈಗೊಳ್ಳಲಿದ್ದಾರೆ. ಮೀನುಗಾರಿಕೆ ವೇಳೆಗೆ ಪ್ರತಿ ವರ್ಷವೂ ಒಡಿಶಾ, ಜಾರ್ಖಂಡ್ ಸೆರಿದಂತೆ ಹೊರ ರಾಜ್ಯದಿಂದ ಆಗಮಿಸುವ ಕಾರ್ಮಿಕರು ಇದೀಗ ಎರಡು ತಿಂಗಳು ರಜೆ ಇರುವ ಹಿನ್ನೆಲೆಯಲ್ಲಿ ಮರಳಿ ಊರು ಸೇರಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕರಾವಳಿ ಕಡಲತೀರದಲ್ಲಿ ಯಾಂತ್ರೀಕೃತ ಮೀನುಗಾರಿಕೆ 60 ದಿನಗಳ ಕಾಲ ಬಂದ್ ಇರಲಿದೆ. ಈ ವರ್ಷ ಚೇತರಿಕೆಯಲ್ಲಿರುವ ಮೀನಾಗಾರಿಕಾ ಉದ್ಯಮಕ್ಕೆ ಸರ್ಕಾರ ಇನ್ನಷ್ಟು ನೆರವು ನೀಡಿದ್ದಲ್ಲಿ ಉತ್ತಮ ಮೀನುಗಾರಿಕೆ ಮಾಡಬಹುದು ಎಂಬುದು ಹಲವಾರು ಮೀನುಗಾರರ ಮಾತಾಗಿದೆ.
ಇದನ್ನೂ ಓದಿ:ಯಾವುದೇ ರೀತಿ ತನಿಖೆಗೆ ನಾವು ಸಿದ್ಧ: ಬಸವರಾಜ ಬೊಮ್ಮಾಯಿ