ಕಾರವಾರ: ಮೀನುಗಳನ್ನು ಹಿಡಿಯೋದು ಅಂದ್ರೇನೆ ಕೆಲವರಿಗೆ ಒಂದು ರೀತಿಯ ವಿಶಿಷ್ಟ ಅನುಭವ. ಮೀನು ಹಿಡಿಯುವ ಕಲೆ ಎಲ್ಲರಿಗೂ ಬರಲ್ಲ, ಆದ್ರೂ ಅವಕಾಶ ಸಿಕ್ರೆ ನಾ ಮುಂದು ತಾ ಮುಂದು ಅಂತಾ ಮೀನು ಹಿಡಿಯೋದಕ್ಕೆ ಮುಂದಾಗುತ್ತಾರೆ. ಅದೇ ರೀತಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಶನಿವಾರ ವಿನೂತನ ಮತ್ಸ್ಯಬೇಟೆಯ ಹಬ್ಬವೊಂದು ನಡೀತು. ಇಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಲಿಂಗ, ಜಾತಿ, ವಯಸ್ಸಿನ ಭೇದ ಭಾವವಿಲ್ಲದೇ ಒಟ್ಟಾಗಿ ಮೀನು ಹಿಡಿದು ಸಂಭ್ರಮಿಸಿದರು.
ಪ್ರತಿವರ್ಷ ಕಿನ್ನರ ಗ್ರಾಮದ ಕಾಳಿ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯುವುದು ವಾಡಿಕೆ. ಮೇ ತಿಂಗಳಲ್ಲಿ ನೀರು ಕಡಿಮೆಯಾದಾಗ ಗ್ರಾಮದಲ್ಲಿ ನಡೆಯುವ ಗಿಂಡಿದೇವಿಯ ಬಂಡಿ ಹಬ್ಬದ ನಂತರ ಈ ಬೇಟೆ ಆಯೋಜಿಸಲಾಗುತ್ತದೆ. ಗ್ರಾಮದವರು ಎಲ್ಲರೂ ಒಟ್ಟಿಗೆ ಮೀನು ಶಿಕಾರಿಯಲ್ಲಿ ಪಾಲ್ಗೊಂಡು ಹಿಡಿದಂತಹ ಮೀನುಗಳಲ್ಲಿ ಅರ್ಧದಷ್ಟನ್ನು ದೇವಸ್ಥಾನದ ಅಭಿವೃದ್ಧಿಗೆ ಹಾಗೂ ಇನ್ನರ್ಧ ಹಿಡಿದವರಿಗೆ ಅಂತಾ ನೀಡಲಾಗುತ್ತದೆ. ಅದರಂತೆ ಈ ಬಾರಿ ನಡೆದ ಮತ್ಸ್ಯಬೇಟೆಯಲ್ಲಿ ನೂರಾರು ಜನ ಭಾಗಿಯಾಗಿ ಬಗೆಬಗೆಯ ಮೀನುಗಳನ್ನು ಹಿಡಿದು ತಂದರು.
ಕಾರವಾರದಲ್ಲಿ ಮೀನು ಹಿಡಿಯೋ ಆಟ ಮೀನುಬೇಟೆಗೆ ಕೇವಲ ಕಿನ್ನರ ಗ್ರಾಮದ ಜನರು ಮಾತ್ರವಲ್ಲದೇ ಸಿದ್ದರ, ಕಡವಾಡ, ಮಾಡಿಭಾಗ್ ಸೇರಿದಂತೆ ಅನೇಕ ಹಳ್ಳಿಗಳ ಜನರು ಸಹ ಪಾಲ್ಗೊಳ್ಳುತ್ತಾರೆ. ಅಲ್ಲದೇ ಕಾರವಾರ, ಅಂಕೋಲಾ ಹಾಗೂ ನೆರೆಯ ಗೋವಾದಿಂದ ಸಹ ಜನರು ಈ ಮೀನು ಬೇಟೆ ನೋಡೋದಕ್ಕೆ ಆಗಮಿಸಿದ್ದು ವಿಶೇಷ.
ಉಪ್ಪು ಹಾಗೂ ಸಿಹಿ ನೀರಿನ ಮಿಶ್ರಣದಲ್ಲಿ ಬೆಳೆಯುವ ಮಡ್ಲೆ, ತಾಂಬೂಸ್, ಸವಟೆ, ನೊಗಲಿ ಸೇರಿದಂತೆ ಅನೇಕ ಜಾತಿಯ ಮೀನುಗಳನ್ನು ಜನರು ಹಿಡಿದು ಖುಷಿಪಟ್ಟರು. ಗ್ರಾಮದವರೇ ಕಿನ್ನರದ ಕಾಳಿ ನದಿಯ ಹಿನ್ನೀರಿನಲ್ಲಿ ವರ್ಷಪೂರ್ತಿ ಮೀನು ಮರಿಗಳನ್ನ ಬೆಳೆಸಿ ವರ್ಷದಲ್ಲಿ ಒಂದು ದಿನ ಮಾತ್ರ ಎಲ್ಲರೂ ಮೀನು ಹಿಡಿಯುತ್ತಾರೆ. ಈ ಮತ್ಸ್ಯಬೇಟೆಯನ್ನು ನೋಡೋದಕ್ಕೆ ನಾನಾ ಕಡೆಯಿಂದ ಜನರು ಬಂದಿದ್ದು ಇಂತಹದ್ದೊಂದು ಸಂಪ್ರದಾಯವನ್ನು ನೋಡೋದೇ ತುಂಬಾ ಖುಷಿಯಾಗುತ್ತದೆ. ಮತ್ಸ್ಯಬೇಟೆ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡುತ್ತದೆ ಅಂತಾರೆ ಮತ್ಸ್ಯಶಿಕಾರಿ ನೋಡಲು ಬಂದಿದ್ದವರು.
ಕಾಳಿ ನದಿಯ ಹಿನ್ನೀರಿನಲ್ಲಿ ಮೀನು ಹಿಡಿಯುವ ಸಂಪ್ರದಾಯ ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸಮರ್ಪಕವಾಗಿ ಮತ್ಸ್ಯಬೇಟೆ ನಡೆದಿರಲಿಲ್ಲ. 2 ವರ್ಷಗಳ ಬಳಿಕ ನಡೆದ ಮತ್ಸ್ಯಬೇಟೆ ಕಾರ್ಯಕ್ರಮ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು.