ಕಾರವಾರ (ಉತ್ತರಕನ್ನಡ) :ಖಾಸಗಿ ವಾಣಿಜ್ಯ ಬಂದರು ಕಾಮಗಾರಿ ವಿರೋಧಿಸಿ ಕರಾವಳಿಯ ಸಾವಿರಾರು ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿರುವ ಘಟನೆ ಹೊನ್ನಾವರದಲ್ಲಿ ನಡೆದಿದೆ.
ಕರಾವಳಿಯಲ್ಲಿ ಮೀನುಗಾರರ ಬೃಹತ್ ಪ್ರತಿಭಟನೆ ಕಾಸರಕೋಡು ಟೊಂಕಾ ಬಳಿ ನಿರ್ಮಾಣಗೊಳ್ಳುತ್ತಿರುವ ವಾಣಿಜ್ಯ ಬಂದರು ಕಾಮಗಾರಿ ವಿರೋಧಿಸಿ ರಾಷ್ಟ್ರೀಯ ಮೀನುಗಾರರ ಸಂಘಟನೆ ನೇತೃತ್ವದಲ್ಲಿ ಉಡುಪಿ, ಮಂಗಳೂರು ಹಾಗೂ ಉತ್ತರಕನ್ನಡದ ಮೀನುಗಾರರು ಸಂಪೂರ್ಣ ಮೀನುಗಾರಿಕೆ ಸ್ಥಗಿತಗೊಳಿಸಿ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಟೊಂಕಾ ಬಂದರು ಪ್ರದೇಶದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಮೀನುಗಾರರು, ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಹೊನ್ನಾವರದ ಶರಾವತಿ ಸರ್ಕಾರದ ಬಳಿ ಸೇರಿ ಬಳಿಕ ಪೊಲೀಸ್ ಠಾಣೆ ಪಕ್ಕದ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದ್ದಾರೆ.
ಪ್ರತಿಭಟನೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಮೀನುಗಾರರು, ಖಾಸಗಿ ಕಂಪನಿಯನ್ನು ಓಡಿಸಿ ಮೀನುಗಾರರನ್ನು ರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿ ಸಂಪೂರ್ಣ ಅಕ್ರಮವಾಗಿದ್ದು, ಬಂದರು ನಿರ್ಮಾಣವಾದಲ್ಲಿ ಈ ಭಾಗದ ಮೀನುಗಾರರು ನೆಲೆ ಕಳೆದುಕೊಳ್ಳುವ ಆತಂಕ ಇದೆ.
ಕಾಮಗಾರಿಯಿಂದಾಗಿ ಕೇವಲ ಮೀನುಗಾರರಿಗೆ ಮಾತ್ರವಲ್ಲದೆ ಜೀವ ವೈವಿಧ್ಯತೆಗೂ ಸಾಕಷ್ಟು ನಷ್ಟವಾಗಲಿದೆ. ಸಂಗಮ ಪ್ರದೇಶದಲ್ಲಿ ನಡೆಯುವ ಬಂದರು ಕಾಮಗಾರಿಯಿಂದ ಮುಂದೆ ಮತ್ಸ್ಯ ಕ್ಷಾಮ ಎದುರಾಗಿ ಮೀನಿನ ಸಂತತಿ ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಮೀನುಗಾರರ ಜಮೀನಿಗೆ ಸುಳ್ಳು ದಾಖಲೆ ಸೃಷ್ಟಿ ಕಾಮಗಾರಿ ನಡೆಸುತ್ತಿದ್ದು, ಇದೇ ಕಾರಣಕ್ಕೆ ಮೀನುಗಾರರು ಬಂದರು ಕಾಮಗಾರಿಯನ್ನು ಸಂಪೂರ್ಣ ವಿರೋಧಿಸುತ್ತಿದ್ದೇವೆ. ಆದ್ದರಿಂದ ಸರ್ಕಾರ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.