ಕರ್ನಾಟಕ

karnataka

ETV Bharat / state

ಅಘನಾಶಿನಿ‌ ನದಿಯಲ್ಲಿ ಚಿಪ್ಪಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಮೀನುಗಾರರು ಒತ್ತಾಯ - ಕಾರವಾರ ಮೀನುಗಾರರ ಸಮಸ್ಯೆ

ಅಘನಾಶಿನಿ ನದಿಯಲ್ಲಿ ಚಿಪ್ಪಿ ತೆಗೆಯಲು ನೀಡಿರುವ ಪರವಾನಿಗೆ ಮುಕ್ತಾಯಗೊಂಡಿದ್ದು, ಗಣಿಗಾರಿಕೆಗೆ ಮರಳಿ ಅನುಮತಿ ನೀಡದಂತೆ ಮೀನುಗಾರರು ಒತ್ತಾಯಿಸಿದ್ದಾರೆ.

ಚಿಪ್ಪಿ ಗಣಿಗಾರಿಕೆ
ಚಿಪ್ಪಿ ಗಣಿಗಾರಿಕೆ

By

Published : Feb 6, 2022, 8:44 AM IST

ಕಾರವಾರ: ಅಘನಾಶಿನಿ ನೂರಾರು ಬಗೆಯ ಮೀನುಗಳಿಗೆ ಆಸರೆಯಾಗಿರುವ ನದಿ. ಈ ನದಿ ಪ್ರದೇಶವನ್ನೇ ಅವಲಂಬಿಸಿ ಸಾಕಷ್ಟು ಮೀನುಗಾರರು ಜೀವನ ನಡೆಸುತ್ತಿದ್ದು, ಇದರೊಂದಿಗೆ ನದಿ, ಸಮುದ್ರದ ಸಂಗಮ ಪ್ರದೇಶದಲ್ಲಿ ಸಿಗುವ ಚಿಪ್ಪಿಕಲ್ಲುಗಳನ್ನು ತೆಗೆದು ಸಾಕಷ್ಟು ಮಂದಿ ಮಹಿಳೆಯರು ಬದುಕು ಕಟ್ಟಿಕೊಂಡಿದ್ದರು. ಆದ್ರೆ, ಆ ಭಾಗದಲ್ಲಿ ನಡೆಯುತ್ತಿದ್ದ ಚಿಪ್ಪಿ ಗಣಿಗಾರಿಕೆಯಿಂದಾಗಿ ಅನೇಕರು ತೊಂದರೆ ಅನುಭವಿಸಿದ್ದು, ಇದೀಗ ಸ್ಥಗಿತಗೊಂಡಿರುವ ಗಣಿಗಾರಿಕೆ ಪ್ರಾರಂಭಕ್ಕೆ ಮತ್ತೆ ಅವಕಾಶ ನೀಡದಂತೆ ಒತ್ತಾಯಿಸುತ್ತಿದ್ದಾರೆ.

ಚಿಪ್ಪಿಕಲ್ಲು ಕರಾವಳಿ ಜನರ ಪ್ರಮುಖ ಆಹಾರಗಳಲ್ಲಿ ಒಂದು. ನದಿ ಹಾಗೂ ಸಮುದ್ರ ಸೇರುವ ಸಂಗಮ ಪ್ರದೇಶದಲ್ಲಿ ಮಾತ್ರ ಕಂಡುಬರುವ ಈ ವಿಶೇಷ ಬಗೆಯ ಜೀವಿಯನ್ನ ಸಾಕಷ್ಟು ಮಂದಿ ಆಹಾರವಾಗಿ ಸೇವಿಸುತ್ತಾರೆ. ನದಿ ಆಳದ ನೆಲದಲ್ಲಿ ಚಿಪ್ಪುಗಳಲ್ಲಿ ಸಿಗುವ ಈ ಜೀವಿಯನ್ನ ಸಾಂಪ್ರದಾಯಿಕ ಮೀನುಗಾರರು ನೀರಲ್ಲಿ ಮುಳುಗು ಹಾಕಿ ಸಾಹಸಪಟ್ಟು ತೆಗೆದುಕೊಂಡು ಬರುತ್ತಾರೆ. ಮಾರುಕಟ್ಟೆಯಲ್ಲೂ ಇದಕ್ಕೆ ಸಾಕಷ್ಟು ಬೇಡಿಕೆ ಇರುವ ಹಿನ್ನೆಲೆ ಹೆಚ್ಚಾಗಿ ಮೀನುಗಾರ ಮಹಿಳೆಯರು ಈ ಚಿಪ್ಪಿಕಲ್ಲನ್ನ ತೆಗೆದು ಮಾರಾಟ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ.

ಚಿಪ್ಪಿ ಗಣಿಗಾರಿಕೆ ಕುರಿತು ಮಾಹಿತಿ ನೀಡಿದ ಡಿಸಿ

ಅದರಲ್ಲೂ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಘನಾಶಿನಿ ನದಿ ಅಳಿವೆಯಲ್ಲಿ ಈ ಚಿಪ್ಪಿಕಲ್ಲುಗಳು ಹೇರಳ ಪ್ರಮಾಣದಲ್ಲಿ ಇರುವುದರಿಂದ ಇಲ್ಲಿ ಚಿಪ್ಪಿಗಣಿಗಾರಿಕೆಗೂ ಸಹ ಅನುಮತಿಯನ್ನ ನೀಡಲಾಗಿತ್ತು. ಆದ್ರೆ ಗಣಿಗಾರಿಕೆ ಹೆಸರಿನಲ್ಲಿ ಅವ್ಯಾಹತವಾಗಿ ಚಿಪ್ಪಿಕಲ್ಲುಗಳನ್ನ ತೆಗೆದ ಪರಿಣಾಮ ಇದು ಮೀನುಗಾರಿಕೆ ಮೇಲೆ ಸಾಕಷ್ಟು ಪರಿಣಾಮವನ್ನ ಬೀರಿತ್ತು. ಅಲ್ಲದೇ, ಬೇಕಾಬಿಟ್ಟಿಯಾಗಿ ಚಿಪ್ಪಿಕಲ್ಲುಗಳನ್ನ ತೆಗೆದ ಪರಿಣಾಮ ನದಿ ಪರಿಸರದ ಮೇಲೂ ಸಾಕಷ್ಟು ಹಾನಿಯಾಗಿದ್ದು, ಹೀಗಾಗಿ ಚಿಪ್ಪಿ ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಸಾಕಷ್ಟು ಮಂದಿ ಮೀನುಗಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.

ಓದಿ:ಅತಿ ದೊಡ್ಡ ಇ-ತ್ಯಾಜ್ಯ ರೋಬೋ: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್​​ನಲ್ಲಿ ದಾಖಲೆ

ಅದರಂತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಕುಮಟಾ ಉಪ ವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಚಿಪ್ಪಿ ತೆಗೆಯುವಿಕೆಯನ್ನ ಸ್ಥಗಿತಗೊಳಿಸುವಂತೆ ಗಣಿಗಾರಿಕೆ ಪರವಾನಗಿ ಪಡೆದ ಕಂಪನಿ ಹಾಗೂ ಸ್ಥಳೀಯ ಮೀನುಗಾರರೊಂದಿಗೆ ಸಭೆ ನಡೆಸಿತ್ತು. ಸದ್ಯ ಗಣಿಗಾರಿಕೆ ಪರವಾನಗಿ ಅವಧಿ ಮುಕ್ತಾಯಗೊಂಡಿದ್ದು, ಗಣಿಗಾರಿಕೆ ಉಲ್ಲಂಘನೆಯ ಕುರಿತು ವರದಿ ಸಿಗುವವರೆಗೆ ಚಿಪ್ಪಿ ತೆಗೆಯುವಿಕೆಯನ್ನ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಅಘನಾಶಿನಿ ನದಿ ದಂಡೆಯಲ್ಲಿ ಅನಾದಿ ಕಾಲದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಮೀನುಗಾರರು ಬದುಕು ಕಟ್ಟಿಕೊಂಡಿದ್ದಾರೆ. ನದಿಯ ಸುಮಾರು 21ಕಿ.ಮೀ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಪದ್ದತಿಯಂತೆ ಚಿಪ್ಪಿಕಲ್ಲು, ಬಳಚು, ಕಲ್ವಾಗಳನ್ನ ತೆಗೆಯುತ್ತಾ ಜೀವನ ಸಾಗಿಸುತ್ತಿದ್ದರು. ಆದ್ರೆ , ಕಳೆದ 30 ವರ್ಷದ ಹಿಂದೆ ಚಿಪ್ಪಿಕಲ್ಲು ಗಣಿಗಾರಿಕೆಗೆ ಸರ್ಕಾರ ಅವಕಾಶ ನೀಡಿದ್ದು ಗಣಿಗಾರಿಕೆ ಹೆಸರಿನಲ್ಲಿ ನದಿಯಲ್ಲಿ ಆಳವಾದ ಗುಂಡಿಗಳನ್ನ ತೆಗೆಯಲಾಗಿದೆ. ಇದರಿಂದ ಇತರೆ ಜಲಚರಗಳ ವಾಸಕ್ಕಿದ್ದ ನದಿ ವಾತಾವರಣದ ಮೇಲೆ ಪರಿಣಾಮ ಬೀರಿದ್ದು, ಮೀನುಗಳ ಸಂತತಿಯೂ ಕುಂಠಿತವಾಗಿದೆ. ಅಲ್ಲದೇ, ಚಿಪ್ಪಿಕಲ್ಲು ತೆಗೆಯಲು ನದಿಗೆ ಇಳಿದ ಸಾಕಷ್ಟು ಮಂದಿ ಗಣಿಗಾರಿಕೆಯಿಂದಾದ ಹೊಂಡಗಳಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಅವಘಡಗಳು ಸಹ ನಡೆದಿವೆ. ಹೀಗಾಗಿ, ಅಘನಾಶಿನಿ ಅಳಿವೆಯನ್ನ ಚಿಪ್ಪಿ ಗಣಿಗಾರಿಕೆ ಪ್ರದೇಶದ ಬದಲಿಗೆ ಚಿಪ್ಪಿಕಲ್ಲು ಸಂತತಿ ಬೆಳೆಯುವ ಪ್ರದೇಶ ಎಂದು ಪರಿಗಣಿಸಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಚಿಪ್ಪಿಕಲ್ಲು ಗಣಿಗಾರಿಕೆಗೆ ಸರ್ಕಾರ ಅವಕಾಶ ನೀಡಬಾರದು ಅಂತಾ ಮೀನುಗಾರರು ಮನವಿ ಮಾಡಿದ್ದಾರೆ.

ಓದಿ:U-19 ವಿಶ್ವಕಪ್: 5ನೇ ಬಾರಿ ಚಾಂಪಿಯನ್ ಪಟ್ಟ ಗೆದ್ದ ಭಾರತ

ಸಾಕಷ್ಟು ವಿರೋಧಕ್ಕೆ ಗುರಿಯಾಗಿದ್ದ ಚಿಪ್ಪಿಕಲ್ಲು ಗಣಿಗಾರಿಕೆ ಪರವಾನಗಿ ಮುಕ್ತಾಯಗೊಂಡಿದ್ದು, ಗಣಿಗಾರಿಕೆಗೆ ಮರಳಿ ಅನುಮತಿ ನೀಡದಂತೆ ಮೀನುಗಾರರು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ನದಿ, ಪರಿಸರಕ್ಕೆ ಗಣಿಗಾರಿಕೆಯಿಂದಾಗಿರುವ ಹಾನಿಯ ಕುರಿತು ವರದಿ ಇನ್ನೂ ಬರಬೇಕಿದ್ದು ಸರ್ಕಾರ ಮುಂದೆ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕು.

ABOUT THE AUTHOR

...view details