ಕಾರವಾರ: ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ವಿರೋಧಿಸಿ ಮೀನುಗಾರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವೂ ಮುಂದುವರೆದಿದ್ದು, ಇಂದು ಮೀನುಮಾರುಕಟ್ಟೆ ಬಳಿ ಜಮಾಯಿಸಿದ ನೂರಾರು ಮೀನುಗಾರರು ಸಂಸದ ಅನಂತಕುಮಾರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಭಾವಚಿತ್ರಗಳಿಗೆ ಬ್ಯಾನರ್ ತುಳಿದು ಆಕ್ರೋಶ ಹೊರಹಾಕಿದ್ದಾರೆ.
ಸಾಗರಮಾಲ ಯೋಜನೆಯಡಿ ಎರಡನೇ ಹಂತದ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿಯನ್ನು ವಿರೋಧಿಸುತ್ತಿರುವ ಮೀನುಗಾರರು ಎರಡನೇ ದಿನವಾದ ಇಂದು ಕೂಡ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರು.
ನಗರದ ಮೀನುಮಾರುಕಟ್ಟೆ ಬಳಿ ಜಮಾಯಿಸಿರುವ ಮೀನುಗಾರರು ಹಾಗೂ ಮೀನುಮಾರಾಟಗಾರ ಮಹಿಳೆಯರು ಸಂಸದ ಅನಂತಕುಮಾರ ಹೆಗಡೆ, ಶಾಸಕಿ ರೂಪಾಲಿ ನಾಯ್ಕ್ ವಿರುದ್ಧ ಘೋಷಣೆ ಕೂಗಿದರು. ಜೊತೆಗೆ ಇಬ್ಬರ ಭಾವಚಿತ್ರಗಳಿರುವ ಬ್ಯಾನರ್ ತುಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಭದ್ರತೆಯಲ್ಲಿ ನಡೆಯುತ್ತಿರುವ ವಾಣಿಜ್ಯ ಬಂದರು ವಿಸ್ತರಣೆಯ ಅಲೆತಡೆಗೋಡೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಲೆ ತಡೆಗೋಡೆ ನಿರ್ಮಾಣವಾದಲ್ಲಿ ಮೀನುಗಾರರ ಬದುಕು ಬೀದಿಪಾಲಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಮೀನುಮಾರುಕಟ್ಟೆ ಸಂಪೂರ್ಣ ಬಂದ್ ಆಗಿದೆ. ಮೀನುಮಾರುಕಟ್ಟೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಮೀನುಗಾರರು ಗಲಾಟೆ ನಡೆಸಲು ಮುಂದಾದರೇ ಸೂಕ್ತ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.