ಕಾರವಾರ (ಉತ್ತರ ಕನ್ನಡ) :ಕೊರೊನಾ ಸಂಕಷ್ಟದ ಸಮಯದಲ್ಲಿ ಉದ್ಯೋಗ ಇಲ್ಲದೇ ಮನೆಯಲ್ಲಿ ಖಾಲಿ ಕುಳಿತ್ತಿದ್ದ ಮೀನುಗಾರರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಖಾಸಗಿ ಬಂದರು ರಸ್ತೆ ಕಾಮಗಾರಿಗಾಗಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೀನುಗಾರರ ಮನೆ ಹಾಗೂ ಶೆಡ್ಗಳನ್ನು ನೆಲಸಮ ಮಾಡಲಾಗಿದ್ದು, ಮೀನುಗಾರರ ಬದುಕು ಬೀದಿಗ ಬಂದಿದೆ.
ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಹೆಚ್ಪಿಪಿಎಲ್ ಕಂಪನಿ ವಾಣಿಜ್ಯ ಬಂದರು ನಿರ್ಮಿಸುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಮಂಜೂರು ಮಾಡಿದೆ. ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿ ಸ್ಥಳೀಯರ ತೀವ್ರ ವಿರೋಧದಿಂದ ಕೈಬಿಟ್ಟಿದ್ದ ಕಂಪನಿ ಇದೀಗ ಮತ್ತೆ ತೆರವು ಕಾರ್ಯಾಚರಣೆ ನಡೆಸಿ ರಸ್ತೆ ನಿರ್ಮಾಣ ಮಾಡಲು ಮುಂದಾಗಿದೆ.
ಇಂದು ಬೆಳ್ಳಂಬೆಳಗ್ಗೆ 500ಕ್ಕೂ ಹೆಚ್ಚು ಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ 3 ಜೆಸಿಬಿಗಳ ಮೂಲಕ ಹತ್ತಾರು ಶೆಡ್ಗಳನ್ನು ಉರುಳಿಸಲಾಗಿದೆ. ಇದಲ್ಲದೇ ಕಡಲ ತೀರದಂಚಿನ ತೆಂಗಿನ ಮರಗಳನ್ನ ನಾಶ ಮಾಡಲಾಗಿದೆ. ಮನೆ ತೆರವು ಮಾಡದಂತೆ ಅಡ್ಡಬಂದ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.