ಕಾರವಾರ :ಕೆಲವೆಡೆ ಆಗಾಗ ಕೆರೆಯಲ್ಲಿ ಮೀನು ಹಿಡಿಯುವುದನ್ನ ನೋಡುತ್ತಿರುತ್ತೇವೆ. ಇನ್ನೂ ಕೆಲವೆಡೆ ಬಲೆ, ಕೂಣಿ ಮೂಲಕ ಕೆರೆಯಲ್ಲಿ ಬೆಳೆಸಲಾದ ಮೀನುಗಳನ್ನು ಬೇಟೆಯಾಡಲಾಗುತ್ತದೆ. ಆದ್ರೆ, ಇಲ್ಲೊಂದು ಕಡೆ ಇದೇ ಮೊದಲ ಬಾರಿಗೆ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಸ್ಪರ್ಧಾಳುಗಳು ತಮ್ಮದೇ ಶೈಲಿಯಲ್ಲಿ ಗಾಳ ಹಾಕುವ ಕಲೆ ಪ್ರದರ್ಶಿಸಿದರು..
ಮೀನು ಹಿಡಿಯುವ ಸ್ಪರ್ಧೆಯ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿರುವುದು.. ಉತ್ತರಕನ್ನಡ ಜಿಲ್ಲೆಯ ಕಾರವಾರದ ಬೈತಖೋಲದಲ್ಲಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಬೈತಖೋಲದ ಮೀನುಗಾರಿಕಾ ಬಂದರು ಪ್ರದೇಶದಲ್ಲಿರುವ ಅಲೆತಡೆಗೋಡೆ ಬಳಿ ಯುವ ಮೀನುಗಾರರ ಸಂಘರ್ಷ ಸಮಿತಿ ಈ ಸ್ಪರ್ಧೆಯನ್ನ ಆಯೋಜಿಸಿತ್ತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಖುದ್ದು ಗಾಳ ಹಾಕುವ ಮೂಲಕ ಕಾರ್ಯಕ್ರಮವನ್ನ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಆಧುನಿಕ ಮಾದರಿಯ ಆ್ಯಂಗ್ಲಿಂಗ್ ಹಾಗೂ ಸಾಂಪ್ರದಾಯಿಕ ಮಾದರಿಯ ಕೈಗಾಳ ಹಾಕುವ ವಿಧಾನದಲ್ಲೂ ಸಹ ಜಿಲ್ಲಾಧಿಕಾರಿ ಗಾಳ ಹಾಕಿ ಮೀನು ಹಿಡಿಯಲು ಯತ್ನಿಸಿದರು.
ಗಾಳ ಹಾಕುವುದು ಸಾಂಪ್ರದಾಯಿಕವಾಗಿ ಮೀನು ಹಿಡಿಯುವ ಒಂದು ಪದ್ದತಿಯಾಗಿದ್ದು, ಸಾಕಷ್ಟು ಮಂದಿ ಇದನ್ನ ಹವ್ಯಾಸವಾಗಿಯೂ ಮಾಡಿಕೊಂಡು ಬರುತ್ತಾರೆ. ಹೀಗಾಗಿ, ಈ ಗಾಳ ಹಾಕುವಿಕೆಯನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಸ್ಪರ್ಧೆ ಆಯೋಜಿಸಿರುವುದು ಒಂದು ಹೊಸ ಪ್ರಯತ್ನವಾಗಿದೆ. ಪ್ರತಿವರ್ಷ ಈ ಕಾರ್ಯಕ್ರಮವನ್ನ ಆಯೋಜಿಸುವ ಮೂಲಕ ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಸಹ ಇದರಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಜಿಲ್ಲಾಧಿಕಾರಿ ಶುಭಕೋರಿದರು.
ಇನ್ನು ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಗೆ ಉತ್ತರಕನ್ನಡ ಜಿಲ್ಲೆಯಿಂದ ಮಾತ್ರವಲ್ಲದೇ ಹುಬ್ಬಳ್ಳಿ ಸೇರಿ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ರೇಡಿಯಂ ಹಾಗೂ ಕೈ ಗಾಳ ಹೀಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅತೀ ಹೆಚ್ಚು ಮೀನು ಹಿಡಿದವರನ್ನು ವಿಜೇತರೆಂದು ಘೋಷಣೆ ಮಾಡಲಾಯಿತು. ಹೆಚ್ಚು ತೂಕದ ಮೀನು ಹಿಡಿದವರಿಗೂ ಪ್ರತ್ಯೇಕ ಪ್ರಶಸ್ತಿಯನ್ನ ನೀಡಲಾಯಿತು.
ಓದಿ:ಪಿಎಸ್‌ಐ ನೇಮಕಾತಿ ಅಕ್ರಮ : ಸಾಮಾಜಿಕ ಜಾಲತಾಣದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ನಿಂದನೆ!