ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ಗೆ ಆಕಸ್ಮಿಕ ಬೆಂಕಿ ತಗುಲಿ ಬೋಟ್ ಭಾಗಶಃ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಬೋಟ್ನಲ್ಲಿದ್ದ ಏಳು ಮಂದಿ ಮೀನುಗಾರರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಣೆ ಮಾಡಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.
ಮಲ್ಪೆ ಮೂಲದ ವರದ ವಿನಾಯಕ ಎಂಬ ಬೋಟ್ ಮೀನುಗಾರಿಕೆ ನಡೆಸುತ್ತಾ ಕಾರವಾರ ಸಮೀಪ ಬಂದಾಗ ಬೋಟ್ನ ಇಂಜಿನ್ ರೂಮ್ನಲ್ಲಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾಗಿತ್ತು. ತಕ್ಷಣ ಸಮೀಪದಲ್ಲಿಯೇ ಇದ್ದ ವರದರಾಜ ಬೋಟ್ ನವರು ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.