ಕಾರವಾರ:ಗುಜರಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ಗುಜರಿ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಇಲ್ಲಿಯ ಕುಮಟಾ ಪಟ್ಟಣದ ಅಳ್ವೇಕೋಡಿಯಲ್ಲಿ ನಡೆದಿದೆ. ಕುಮಟಾದ ಬಾಷಾ ಶೇಖ್ ಎನ್ನುವವರಿಗೆ ಸೇರಿದ ಗುಜರಿ ಅಂಗಡಿಗೆ ಸೋಮವಾರ ರಾತ್ರಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ನೋಡ ನೋಡುತ್ತಿದ್ದಂತೆ ಈಡಿ ಗುಜರಿ ರಾಶಿಯನ್ನು ಸುತ್ತುವರಿದಿತ್ತು. ಪ್ಲಾಸ್ಟಿಕ್, ಮರದ ಪೀಠೋಪಕರಣಗಳು ಇದ್ದ ಕಾರಣ ಬೆಂಕಿ ಜೋರಾಗಿ ಹೊತ್ತಿಕೊಂಡಿದೆ.
ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕಾಗಮಿಸಿದ ಕುಮಟಾ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಕ್ಕೆ ಇಳಿದಿದ್ದರು. ಬೆಂಕಿ ಜ್ವಾಲೆ ಹೆಚ್ಚುತ್ತಲೆ ಇದ್ದು ಪಕ್ಕದ ಮನೆಗಳಿಗೂ ಬೆಂಕಿ ತಗಲುವ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಅಂಕೋಲಾ ಮತ್ತು ಹೊನ್ನಾವರದ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಜಂಟಿಯಾಗಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿ ಹೊತ್ತೊಯ್ದ ಚಿರತೆ ಸಿಸಿಟಿವಿಯಲ್ಲಿ ಸೆರೆ:ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ರಾಮನಗರದಲ್ಲಿ ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಮನಗರದ ಅಗೋಸ್ತಿನ ಸಾಲೀಸ್ ರೊಡ್ರೀಗಸ್ ಎಂಬುವವರ ಮನೆಯ ಟೆರಸ್ ಮೇಲೆ ಮಲಗಿದ್ದ ನಾಯಿಯನ್ನು ಚಿರತೆ ಬೇಟೆಯಾಡಿ ಹೊತ್ತೊಯ್ದಿತ್ತು. ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಚಿರತೆ ಕಾಟ ಜೋರಾಗಿದ್ದು, ಅನೇಕ ನಾಯಿ, ಜಾನುವಾರುಗಳನ್ನ ಭೇಟೆಯಾಡಿ ಹೊತ್ತೊಯ್ದಿದೆ. ಆದರೆ, ನಿರಂತರವಾಗಿ ಚಿರತೆ ದಾಳಿ ಮಾಡುತ್ತಿರುವುದರಿಂದ ಆತಂಕಗೊಂಡ ಸ್ಥಳೀಯರು ಚಿರತೆ ಸೆರೆಹಿಡಿದು ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.