ಕಾರವಾರ: ಉತ್ತರ ಕನ್ನಡಿಗರ ಬಹುಬೇಡಿಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸಿಗೆ ಸರ್ಕಾರ ತಣ್ಣೀರೆರಚಿದೆ. ಕಾರವಾರದ ಕ್ರಿಮ್ಸ್ನಿಂದ ಕಳುಹಿಸಲಾಗಿದ್ದ ಆಸ್ಪತ್ರೆ ನಿರ್ಮಾಣ ಕುರಿತಾದ ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸುವ ಮೂಲಕ ಬೇಡಿಕೆ ನಿರ್ಲಕ್ಷಿಸಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ದಶಕಗಳ ಬೇಡಿಕೆಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಕಳೆದ ಮೂರು ವರ್ಷಗಳಿಂದ ಹೋರಾಟ, ಪ್ರತಿಭಟನೆಗಳು ತೀವ್ರಗೊಂಡಿದ್ದವು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ ನಂತರ ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನಿಂದ ಆಸ್ಪತ್ರೆ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ, ಕಳುಹಿಸಿದ್ದ ಪ್ರಸ್ತಾವವನ್ನೇ ಆರ್ಥಿಕ ಇಲಾಖೆ ತಿರಸ್ಕರಿಸಿರುವುದು ಅಧಿವೇಶನದಲ್ಲಿ ಬೆಳಕಿಗೆ ಬಂದಿದೆ.
ಆಸ್ಪತ್ರೆ ಬೇಡಿಕೆಯ ಕುರಿತಂತೆ ಅಧಿವೇಶನದಲ್ಲಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಅವರು ಪ್ರಶ್ನಿಸಿದ್ದರು. ಉತ್ತರಕನ್ನಡ ಜಿಲ್ಲಾ ಕೇಂದ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯಾ? ಎಂದು ಕೇಳಿದ್ದರು. ಇದಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಪ್ರತಿಕ್ರಿಯೆ ನೀಡಿ, ಕಾರವಾರದ ಕ್ರಿಮ್ಸ್ ನಿರ್ದೇಶಕರಿಂದ ಸಲ್ಲಿಸಲಾದ ಪ್ರಸ್ತಾವವನ್ನು ಆರ್ಥಿಕ ಇಲಾಖೆ ತಿರಸ್ಕರಿಸಿರುವುದಾಗಿ ಹೇಳಿದರು. ಇದು ಉತ್ತರಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಸುಸಜ್ಜಿತ ಆಸ್ಪತ್ರೆಗಾಗಿ ಉಪವಾಸ ಸತ್ಯಾಗ್ರಹ; ಉ.ಕನ್ನಡದಲ್ಲಿ ಹೋರಾಟ ತೀವ್ರ