ಇಂದು-ನಾಳೆ ಕದಂಬೋತ್ಸವ, ಸಕಲ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ - ಫೆ. 8 ರಂದು ಮ್ಯಾರಥಾನ್ ನಡೆಯಲಿದೆ
ಫೆ. 8 ಮತ್ತು 9ರಂದು ಏರ್ಪಾಟಾಗಿರುವ ಕದಂಬೋತ್ಸವಕ್ಕೆ ಸಕಲ ಸಿದ್ಧತೆ ನಡೆಸಿದ ಜಿಲ್ಲಾಡಳಿತದ ಕಾರ್ಯ ಬಹುತೇಕ ಅಂತಿಮಗೊಂಡಿದೆ.
ಶಿರಸಿ:ಕನ್ನಡನಾಡಿನ ಪ್ರಥಮ ರಾಜಧಾನಿ ಬನವಾಸಿ ಕನ್ನಡದ ಮೊದಲ ರಾಜ ಮನೆತನ ಕದಂಬರ ನೆನಪಿನಲ್ಲಿ ನಡೆಯುವ ಕದಂಬೋತ್ಸವಕ್ಕೆ ಅಣಿಗೊಂಡಿದ್ದು, ಫೆ. 8 ಮತ್ತು 9ರಂದು ಏರ್ಪಾಟಾಗಿರುವ ಕದಂಬೋತ್ಸವದ ಸಿದ್ಧತೆ ಬಹುತೇಕ ಅಂತಿಮಗೊಂಡಿದೆ.
ಯಶಸ್ವಿ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ನಡೆಸುತ್ತಿದೆ. ಬನವಾಸಿಯ ಮಾರಿಹಕ್ಕಲು ಮೈದಾನದಲ್ಲಿ ಬೃಹತ್ ಶಾಮಿಯಾನ ಹಾಕಲಾಗುತ್ತಿದೆ. 40ಸಾವಿರ ಚದರ ಅಡಿ ಜಾಗದಲ್ಲಿ ಎಂಟು ಸಾವಿರ ಕುರ್ಚಿ ಹಿಡಿಯಬಹುದಾದ ಬೃಹತ್ ಶಾಮಿಯಾನ ನಿರ್ಮಾಣ ಕಾರ್ಯದಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೆಲಸಗಾರರು ಅವಿರತ ಶ್ರಮವಹಿಸುತ್ತಿದ್ದಾರೆ. ಶಿವಮೊಗ್ಗ ಎಸ್.ಆರ್.ಎಸ್, ಹುಬ್ಬಳ್ಳಿ ಹಾಗೂ ಬೆಂಗಳೂರಿನ ತಂಡಗಳು ಕಳೆದ ನಾಲ್ಕು ದಿನಗಳಿಂದ ನಿರಂತರ ಕೆಲಸ ಮಾಡುತ್ತಿದೆ.
ವೇದಿಕೆ ಎದುರಿಗೆ 10ಸಾವಿರ ವ್ಯಾಟ್‌ನ ಸೌಂಡ್ ಸಿಸ್ಟಮ್ ಹಾಗೂ ವೇದಿಕೆ ಹಿಂಬಾಗದಲ್ಲಿ 20ಸಾವಿರ ವ್ಯಾಟ್‌ನ ಸೌಂಡ್ ಸಿಸ್ಟಮ್ ಅಳವಡಿಸಲಾಗಿದೆ. 500 ವಿಐಪಿ ಕುರ್ಚಿ ಹಾಕಲಾಗುತ್ತದೆ. ಒಟ್ಟಾರೆ 3000 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಯೂರವರ್ಮ ವೇದಿಕೆಯಲ್ಲಿ ಸಿವಿಲ್ ಕಾಮಗಾರಿ ಒಂದೆಡೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕಲಾತ್ಮಕ ವಿನ್ಯಾಸದ ಕೆಲಸಗಳು ನಡೆಯುತ್ತಿವೆ. ವೇದಿಕೆಗೆ ತೆರಳುವ ಮಾರ್ಗದಲ್ಲಿ ಬಣ್ಣದ ಧ್ವಜಗಳನ್ನು ಸಾಲಾಗಿ ನಿಲ್ಲಿಸಿದ್ದು, ಆಕರ್ಷಿಸುವಂತಿವೆ. ಹೊರ ಭಾಗದಲ್ಲಿ 40ಕ್ಕೂ ಹೆಚ್ಚು ಮಳಿಗೆ ನಿರ್ಮಿಸಲಾಗಿದೆ. ಬನವಾಸಿ ಪಟ್ಟಣ ಶೃಂಗಾರಗೊಂಡಿದ್ದು, ಎಲ್ಲೆಂದರಲ್ಲಿ ಬ್ಯಾನರ್, ಪೋಸ್ಟರ್‌ಗಳು ಕಂಗೊಳಿಸುತ್ತಿವೆ. ಕದಂಬೋತ್ಸವ ಯಶಸ್ಸಿಗೆ ರಚನೆಯಾದ ವಿವಿಧ ಉಪ ಸಮಿತಿಗಳು ಕೆಲಸ ನಿರ್ವಹಿಸುತ್ತಿವೆ.
ಭರದ ಪ್ರಚಾರ: ತಾಲೂಕಿನ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವದ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಪ್ರಚಾರ ನಡೆಸುವ ಭಾಗವಾಗಿ ಕ್ರೀಡಾ ಸ್ಪರ್ದೆಗಳು ಇಗಾಗಲೇ ಜರುಗಿದ್ದು, ಇಂದು ಮ್ಯಾರಥಾನ್ ನಡೆಯಲಿದೆ. ಸರಕಾರಿ ಇಲಾಖೆಗಳ ಮಳಿಗೆಗಳೊಂದಿಗೆ ಇತರೆ ನಲವತ್ತಕ್ಕೂ ಹೆಚ್ಚೂ ಮಳಿಗೆಗಳ ವಸ್ತು ಪ್ರದರ್ಶನ ಹಾಗೂ ಮಾರಾಟ, ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ವಿವಿಧ ಜಿಲ್ಲೆಗಳ ಸಾವಯವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.