ಬೈತಖೋಲ್ ಭೂದೇವಿ ಗುಡ್ಡ ಕುಸಿಯುವ ಭೀತಿ- ಹೇಳಿಕೆಗಳು ಕಾರವಾರ (ಉತ್ತರ ಕನ್ನಡ) : ನಗರದ ಬೈತಖೋಲ್ ಭೂದೇವಿ ಗುಡ್ಡದ ಬಳಿ ನಡೆಸಿರುವ ನೌಕಾನೆಲೆ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ ಮಳೆ ನೀರು ಮನೆಗಳಿಗೆ ನುಗ್ಗಲಾರಂಭಿಸಿದೆ. ಇದರಿಂದ ಗುಡ್ಡ ಕುಸಿಯುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗುಡ್ಡದ ನೀರು ಬೈತಖೋಲ್ ಗುಡ್ಡದ ತಪ್ಪಲಿನಲ್ಲಿ ವಾಸವಾಗಿರುವ ನಿರಾಶ್ರಿತರ ಮನೆಗಳಿಗೆ ನುಗ್ಗಲಾರಂಭಿಸಿದೆ. ಕಲ್ಲು ಮಣ್ಣು ಮಿಶ್ರಿತ ನೀರು ಮನೆಗಳಿಗೆ ನುಗುತ್ತಿದ್ದು ಜನರು ಪರದಾಡುವಂತಾಗಿದೆ. ಅಲ್ಲದೆ ದಿನವಿಡೀ ಮಳೆಯಾದ ಕಾರಣ ಗುಡ್ಡದ ತಪ್ಪಲಿನ ಜನ ಆತಂಕದಲ್ಲಿಯೇ ದಿನ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರ ದೂರೇನು?: "ನಾವು 25 ವರ್ಷಗಳಿಂದ ಇದೇ ಸ್ಥಳದಲ್ಲಿ ವಾಸವಾಗಿದ್ದೇವೆ. ಆದರೆ ಎಂದು ಈ ರೀತಿ ಮಳೆಗೆ ನೀರು ನುಗ್ಗುತ್ತಿರಲಿಲ್ಲ. ಆದರೆ ಇದೀಗ ನೀರು ನುಗ್ಗುವುದರ ಜೊತೆಗೆ ಗುಡ್ಡ ಕುಸಿಯುವ ಭೀತಿ ಇದೆ. ನೌಕಾನೆಲೆಯವರು ರಸ್ತೆಗಾಗಿ ಗುಡ್ಡ ತೆರವು ಮಾಡಿ ಗುಡ್ಡದ ನೀರನ್ನು ಇದೀಗ ಎಲ್ಲೆಂದರಲ್ಲಿ ಹರಿಬಿಡಲಾಗಿದೆ. ಇದರಿಂದ ಗುಡ್ಡ ಕೆಳಭಾಗದ ಮನೆಗಳಿಗೆ ನುಗ್ಗಲಾರಂಭಿಸಿದೆ. ಅಲ್ಲದೆ ಗುಡ್ಡ ತೆರವಿನ ವೇಳೆ ಬೃಹತ್ ಬಂಡೆಗಲ್ಲುಗಳನ್ನು ತೆರವುಗೊಳಿಸಿದ್ದು ಇದೀಗ ಮಳೆಗಾಲದಲ್ಲಿ ಭಾರಿ ಮಳೆಯಾದಲ್ಲಿ ಕುಸಿದು ಉರುಳುವ ಭೀತಿ ಇದೆ. ಮೊದಲ ಮಳೆಗೆ ಈ ಪರಿಸ್ಥಿತಿ ಎದುರಾಗಿದ್ದು ಇನ್ನು ಎರಡು ತಿಂಗಳು ಮಳೆಗಾಲ ಇರುವ ಕಾರಣ ಕೂಡಲೇ ಈ ಅವ್ಯವಸ್ಥೆ ಸರಿಪಡಿಸಬೇಕು" ಎಂದು ಸ್ಥಳೀಯರಾದ ಕಮಲಾ ಆಗ್ರಹಿಸಿದರು.
"ನೌಕಾನೆಲೆಯವರು ಲೇಡಿಸ್ ಬೀಚ್‌ಗೆ ತೆರಳಲು ಈ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ರಸ್ತೆ ಕಾಮಗಾರಿಯಿಂದ ನಿರಾಶ್ರಿತ ಬಡ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಕಾಮಗಾರಿಯಿಂದ ಗುಡ್ಡದ ತಪ್ಪಲಿನ ಜನರಿಗೆ ಮಳೆಗಾಲದಲ್ಲಿ ತೊಂದರೆಯಾಗುವ ಬಗ್ಗೆ ನೌಕಾನೆಲೆಯವರಿಗೆ ಹಾಗೂ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿ ಹೋರಾಟ ಕೂಡ ನಡೆಸಲಾಗಿತ್ತು. ಆದರೆ ಜಿಲ್ಲಾಡಳಿತ ಬಗ್ಗೆ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಲಾಗಿದ್ದು, ಬಡ ಮೀನುಗಾರರು ಆತಂಕದಲ್ಲಿ ಬದುಕುವಂತಾಗಿದೆ. ಘಟನೆಯ ಬಳಿಕ ನೌಕಾನೆಲೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೆಲ ಬಂಡೆಗಲ್ಲುಗಳನ್ನು ಜೆಸಿಬಿ ಮೂಲಕ ತೆರವು ಮಾಡಿದ್ದಾರೆ. ಆದರೂ ಭಾರಿ ಪ್ರಮಾಣದಲ್ಲಿ ಗುಡ್ಡ ಕೊರೆದ ಕಾರಣ ಮಳೆಗಾಲದಲ್ಲಿ ಕುಸಿಯುವ ಭೀತಿ ಇದ್ದು ಸೂಕ್ತ ಕ್ರಮವಹಿಸಲಿ" ಎಂದು ಸ್ಥಳೀಯ ನಿವಾಸಿ ಕಾಶಿನಾಥ್ ಒತ್ತಾಯಿಸಿದರು.
ಅಧಿಕಾರಿಗಳ ಪ್ರತಿಕ್ರಿಯೆ: ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ ಪ್ರತಿಕ್ರಿಯಿಸಿ, "ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಸ್ಥಳಕ್ಕೆ ನೌಕಾನೆಲೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ವಿರೋಧ ಮಾಡಿದ ಕಾರಣ ನ್ಯಾಯಾಲಯದ ಮೊರೆ ಹೋಗಿ ಮತ್ತೆ ಕಾಮಗಾರಿ ನಡೆಸಲಾಗಿದೆ. ಆದರೆ ಗುಡ್ಡ ಕುಸಿಯದಂತೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಹಾಗೂ ಸ್ಥಳೀಯರಿಗೆ ತಿಳಿಸಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ :ನೌಕಾನೆಲೆಯಿಂದ ಗುಡ್ಡ ಕೊರೆದು ರಸ್ತೆ ಕಾಮಗಾರಿ: ಕಾರವಾರದ ನಿವಾಸಿಗಳಲ್ಲಿ ಆತಂಕ