ಶಿರಸಿ: ಕೊರೊನಾ ನಂತರದಲ್ಲಿ ಕೃಷಿಕರ ಬದುಕು ದುಸ್ತರವಾಗಿದೆ. ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಾಕಷ್ಟು ಪರದಾಟ ನಡೆಯುತ್ತಿದೆ. ಆದರೆ, ಈಗ ಅನಾನಸ್ ಬೆಳೆ ರೈತರ ಬದುಕಿಗೆ ಆಸರೆಯಾಗಿದ್ದು, ಇದೀಗ ತೋಟಗಾರಿಕಾ ಇಲಾಖೆಯ ಹೊಸ ಚಿಂತನೆ ರೈತರ ಬದುಕನ್ನು ಬದಲಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಇದಲ್ಲದೇ, ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದುವ ಆಶಾಭಾವ ರೈತರಲ್ಲಿ ಮೂಡಿದೆ.
2020 ರಲ್ಲಿ ಕೊರೊನಾ ಬಂದ ನಂತರದಲ್ಲಿ ಕೃಷಿಕರು ತಮ್ಮ ಆದಾಯ ಕುಂಠಿತದಿಂದ ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಕೂಲಿಕಾರರ ಸಮಸ್ಯೆಯಿಂದಾಗಿಯೂ ಬೆಳೆ ಬೆಳೆಯಲು ತೊಂದರೆಯಾಗಿತ್ತು. ಅಡಿಕೆ ಹೊರತುಪಡಿಸಿ ಉಳಿದ ಬೆಳೆಗಳಿಗೆ ಬೆಲೆ ಕಡಿಮೆಯಾಗಿ ರೈತರು ಕೈಸುಟ್ಟುಕೊಂಡಿದ್ದರು. ಆದರೆ, ಈಗ ಅನಾನಸ್ ಬೆಲೆ ರೈತರ ಕೈಹಿಡಿದಿದ್ದು, ಶಿರಸಿ ತಾಲೂಕಿನ ಬನವಾಸಿ ಭಾಗದಲ್ಲಿ ರೈತರು ಇದನ್ನು ಹೆಚ್ಚು ಅವಲಂಬಿಸಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತಿದ್ದು, ಉತ್ತರ ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಅಲ್ಲದೇ, ಇದು ಕಡಿಮೆ ಅವಧಿಯ ಬೆಳೆಯಾಗಿದ್ದು, ರೈತರಿಗೆ ಆರ್ಥಿಕ ಶಕ್ತಿ ತುಂಬುತ್ತಿದೆ.
ವ್ಯಾಪಕ ಪ್ರಮಾಣದಲ್ಲಿ ಬೆಳೆ: ಇತ್ತೀಚಿಗೆ ಅನಾನಸ್ ಬೆಳೆಗೆ ಉತ್ತಮ ಬೆಲೆ ಬರುತ್ತಿರುವ ಹಿನ್ನೆಲೆ ರೈತರ ಆಸಕ್ತಿಯನ್ನು ಹಾಗೂ ಆದಾಯವನ್ನು ಮತ್ತಷ್ಟು ಹೆಚ್ಚಿಸಲು ಬಹುಬೇಡಿಕೆ ಹೊಂದಿರುವ ಫಿಲಿಫೈನ್ಸ್ ಮೂಲದ ‘ಎಂ. ಡಿ –2’ ತಳೀಯ ಅನಾನಸ್‍ನ್ನು ಪರಿಚಯಿಸುವ ಪ್ರಾಯೋಗಿಕ ಯೋಜನೆಯನ್ನು ತೋಟಗಾರಿಕಾ ಇಲಾಖೆ ಕೈಗೆತ್ತಿಕೊಂಡಿದೆ. ಸದ್ಯ ಬನವಾಸಿ ವ್ಯಾಪ್ತಿಯಲ್ಲಿ ‘ರಾಜಾ’, ‘ಗೇಂಟ್–ಕ್ಯೂ’ ತಳಿಯ ಅನಾನಸ್‍ಗಳನ್ನು ವ್ಯಾಪಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಉತ್ತರ ಭಾರತದ ದೆಹಲಿ, ಹರಿಯಾಣಕ್ಕೆ ಇಲ್ಲಿಂದ ಹಣ್ಣುಗಳು ಪೂರೈಕೆ ಆಗುತ್ತಿವೆ.