ಶಿರಸಿ (ಉತ್ತರ ಕನ್ನಡ):ಕಾಂಗ್ರೆಸ್–ಜೆಡಿಎಸ್ ಮೈತ್ರಿ ಸರ್ಕಾರ ಜಾರಿಗೆ ತಂದಿದ್ದ ಬೆಳೆಸಾಲ ಮನ್ನಾ ಯೋಜನೆಯ ಫಲದಿಂದ ಉತ್ತರ ಕನ್ನಡ ಜಿಲ್ಲೆಯ ಸುಮಾರು 2 ಸಾವಿರ ರೈತರು ವಂಚಿತರಾಗಿದ್ದಾರೆ. ಸಾಲ ಮನ್ನಾಗೆ ಅರ್ಜಿ ಸಲ್ಲಿಸಿ 3 ವರ್ಷ ಕಳೆದರೂ ದಾಖಲೆಗಳ ಗೊಂದಲ, ತಾಂತ್ರಿಕ ಅಡಚಣೆಯಿಂದ ಅರ್ಹ ರೈತರಿಗೂ ಸಾಲ ಮನ್ನಾ ಸೌಲಭ್ಯ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಒಬ್ಬ ರೈತನಿಗೆ ಗರಿಷ್ಠ 1 ಲಕ್ಷ ರೂ.ವರೆಗಿನ ಬೆಳೆಸಾಲ ಮನ್ನಾ ಮಾಡುವ ಯೋಜನೆ 2018ರ ಆಗಸ್ಟ್‌ನಲ್ಲಿ ಜಾರಿಗೆ ತರಲಾಗಿತ್ತು. ಆದರೆ ಯೋಜನೆ ಜಾರಿಗೊಂಡು ಮೂರು ವರ್ಷ ಕಳೆದರೂ ಹಲವು ರೈತರಿಗೆ ಸೌಲಭ್ಯ ಸಿಗದಂತಾಗಿದೆ. ಅಂದಾಜು 2 ಸಾವಿರ ರೈತರಲ್ಲಿ 900ರಷ್ಟು ರೈತರ ಪಡಿತರ ಚೀಟಿ ದೋಷವೂ ಇದರಲ್ಲಿ ಸೇರಿದೆ. ಬೆಳೆಸಾಲ ಪಡೆಯುವ ರೈತ ಆಯಾ ಸಹಕಾರಿ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ಪಹಣಿ, ಪಡಿತರ ಚೀಟಿ, ಆಧಾರ್ ಕಾರ್ಡ್ ದಾಖಲೆ ನೀಡಬೇಕಿತ್ತು.