ಶಿರಸಿ ಪೂರ್ವ ಭಾಗದಲ್ಲಿ ಬರಗಾಲ ಶಿರಸಿ(ಉತ್ತರ ಕನ್ನಡ):ಮಳೆಯ ಕೊರತೆಯಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಪೂರ್ವ ಭಾಗದಲ್ಲಿ ಭತ್ತ, ಮೆಕ್ಕೆ ಜೋಳ ಬೆಳೆಗಳು ಒಣಗಿ ಹಾಳಾಗಿದ್ದು, ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಹೊಲಗಳು ಬರಿದಾಗಿದೆ. ಇದು ರೈತರನ್ನು ಮಮ್ಮಲ ಮರುವಂತೆ ಮಾಡಿದ್ದು, ಬರಗಾಲ ಘೋಷಣೆ ಮಾಡುವಂತೆ ಆಗ್ರಹ ಹೆಚ್ಚಾಗಿದೆ.
ಬನವಾಸಿ, ಬದನಗೋಡ, ಸಂತೊಳ್ಳಿ ವ್ಯಾಪ್ತಿಯು ಮಳೆಯಾಶ್ರಿತ ಭತ್ತದ ಬೆಳೆಯ ಪ್ರದೇಶವಾಗಿದ್ದು, ಪ್ರಸಕ್ತ ಸಾಲಿನಲ್ಲಿ 2,480 ಹೆಕ್ಟೇರ್ ಭತ್ತ, 1,550 ಹೆಕ್ಟೇರ್ ಅಡಿಕೆ, ನೂರಾರು ಎಕರೆ ಮೆಕ್ಕೆ ಜೋಳ, ಬಾಳೆ ಬೆಳೆಗಳು ನೀರಿಲ್ಲಿದೇ ಒಣಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಬದನಗೋಡ ವ್ಯಾಪ್ತಿಯಲ್ಲಿನ ಬೆಳೆಗಳು ಗೋವಿನ ಆಹಾರಕ್ಕೂ ಬಾರದಂತೆ ಒಣಗಿ ಹಾಳಾಗಿದೆ.
ಅಕಾಲಿಕ ಮಳೆ, ಕೊರತೆಯಿಂದ ಅಡಕೆ ಮಿಳ್ಳೆಗಳು ಈ ಹಿಂದೆ ಉದುರಿ ಹಾಳಾಗಿದ್ದವು. ಈಗ ಹಲವೆಡೆ ಅಡಕೆ ಚಂಡೆಗಳು ಹಳದಿಯತ್ತ ತಿರುಗಿದ್ದು, ಇನ್ನೂ ನೀರಿನ ಕೊರತೆಯಾದಲ್ಲಿ ಸಾಯುವ ಆತಂಕ ಎದುರಾಗಿದೆ. ಇದರ ಜೊತೆಗೆ ಎಕರೆಗೆ 15 ರಿಂದ 20 ಸಾವಿರ ರೂ. ಖರ್ಚು ಮಾಡಿ ಬೆಳೆಯಾದ ಭತ್ತ, ಜೋಳ ನಾಶವಾದ ಕಾರಣ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈಗಾಗಲೇ ಬೆಳೆಗಳು ನಾಶವಾಗಿದೆ. ಇನ್ನು ಮಳೆಯಾದರೂ ಸಹ ಈಗಿನ ಬೆಳೆಗೆ ಯಾವುದೇ ಪ್ರಯೋಜನ ಇಲ್ಲ. ನಾಶವಾಗಿರುವ ಬೆಳೆಗೆ ಪರಿಹಾರ ನೀಡಿ, ಈ ಭಾಗದ ಪ್ರದೇಶವನ್ನು ಬರಗಾಲ ಪೀಡಿತ ಪ್ರದೇಶವಾಗಿ ಘೋಷಣೆ ಮಾಡಬೇಕು ಎಂಬ ಆಗ್ರಹ ರೈತರಿಂದ ವ್ಯಕ್ತವಾಗಿದೆ. ಪ್ರತಿ ಎಕರೆಗೆ ಕನಿಷ್ಠ ಶೇಕಡಾ 25 ರಿಂದ 30 ರಷ್ಟು ಪರಿಹಾರ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಘ - ಸಂಸ್ಥೆಗಳಿಂದ ಪಡೆದ ಸಾಲ ತುಂಬಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗುವ ಸಂಭವವಿದೆ. ಜನಪ್ರತಿನಿಧಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರ ವಿತರಿಸಲು ತಕ್ಷಣ ಕ್ರಮ ವಹಿಸಬೇಕೆಂಬುದು ರೈತ ಸಮುದಾಯದ ಆಗ್ರಹವಾಗಿದೆ.
ಬೆಳೆಗಳ ನಾಶದ ಜೊತೆಗೆ ಬದನಗೋಡ ಮತ್ತು ಬನವಾಸಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಡಿ 31 ಕೆರೆ, ಜಿಲ್ಲಾ ಪಂಚಾಯತ್ ಅಡಿ ಸುಮಾರು 40 ಕೆರೆ ಹಾಗೂ ಗ್ರಾ.ಪಂ ಅಡಿ ಸುಮಾರು 20 ಕೆರೆಗಳಿವೆ. ಇವೆಲ್ಲ ಕೆರೆಗಳಲ್ಲಿ ನೀರು ತಳಮಟ್ಟಕ್ಕೆ ಇಳಿಯುತ್ತಿದೆ. ಹೀಗೆ ಮಳೆ ಕೊರತೆಯಾದರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ. ಇದರಿಂದ ಆಡಳಿತ ಶೀಘ್ರವಾಗಿ ಎಚ್ಚೆತ್ತುಕೊಂಡು ರೈತರ ಸಹಾಯಕ್ಕೆ ನಿಲ್ಲುವ ಅಗತ್ಯವಿದೆ.
ಇದನ್ನೂ ಓದಿ:ಮೊದಲು ನಮ್ಮ ರೈತರ ಬೆಳೆಗಳಿಗೆ ನೀರು ಹರಿಸಿ, ಬೆಳೆ ಸಂರಕ್ಷಿಸಿ: ಸಿಎಂ ಸಿದ್ದರಾಮಯ್ಯ